ಹೆದರಿಸಬಹುದೆಂದು ನಿರೀಕ್ಷಿಸಿದ್ದರೆ ಅದು ಮೂರ್ಖತನ: ಬಿಜೆಪಿ ನೋಟಿಸ್‍ಗೆ ಸಿದ್ದರಾಮಯ್ಯ ತಿರುಗೇಟು

Update: 2020-08-01 13:20 GMT

ಬೆಂಗಳೂರು, ಆ.1: 'ಕೊರೋನ ನಿಯಂತ್ರಣ ಸಂಬಂಧ ವೈದ್ಯಕೀಯ ಉಪಕರಣ ಖರೀದಿಯಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಧಾನಪರಿಷತ್ ಸದಸ್ಯರೊಬ್ಬರಿಂದ ವಕೀಲರ ಮೂಲಕ ನನಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ಕೊಡಿಸಿದ್ದಾರೆ, ಸಂತೋಷ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇವೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಮುಖ್ಯಮಂತ್ರಿ ಯಡಿಯೂರಪ್ಪನವರು, ಸಚಿವರು ಇಲ್ಲವೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಂದ ಲೀಗಲ್ ನೋಟಿಸ್ ಬರಬಹುದೆಂಬ ನಿರೀಕ್ಷೆ ಇತ್ತು. ಒಬ್ಬ ಎಂಎಲ್‍ಸಿಯಿಂದ ಕೊಡಿಸಿದ್ದಾರೆ. ಈ ರೀತಿ ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರಕಾರದ ಮೂರ್ಖತನ. ನಮ್ಮ ಹೋರಾಟವನ್ನು ನಾವು ಜನರ ಬಳಿಗೆ ಕೊಂಡೊಯ್ಯುತ್ತಿದ್ದೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

"ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದು, ಸರಕಾರದಿಂದಲೇ ನೋಟಿಸ್ ನಿರೀಕ್ಷೆ ಇತ್ತು. ಆದರೆ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೋಟಿಸ್ ನೀಡಿದ್ದಾರೆ. ಆದರೆ, ನಾವು ಬಿಜೆಪಿ ವಿರುದ್ಧ ಯಾವುದೇ ಆರೋಪವನ್ನು ಮಾಡಿಲ್ಲ. ಇಂತಹ ನೋಟಿಸ್‍ಗಳಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ'' ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಎಂತಹದ್ದೇ ಪರಿಸ್ಥಿತಿ ಬಂದರೂ ನಾವು ಎದುರಿಸಲು ಸದಾ ಸಿದ್ಧ. ರಾಜ್ಯ ಸರಕಾರ ಲೂಟಿ ಮಾಡುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ. ಕೊರೋನ ಸೋಂಕಿನ ಸಂದರ್ಭದಲ್ಲಿ ಸರಕಾರಕ್ಕೆ ಸಹಕಾರ ನೀಡಬೇಕೆಂದು ಮೂರು ತಿಂಗಳು ಮೌನ ವಹಿಸಿದ್ದೆವು. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಸರಕಾರದ ಭ್ರಷ್ಟಾಚಾರವನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬದ ಆಶಯಗಳು ನಮ್ಮೆಲ್ಲರ ಬದುಕಿನ ಮೌಲ್ಯಗಳಾಗಲಿ.‌ ಸುಖ-ಕಷ್ಟಗಳೆರಡರ ಕಾಲದಲ್ಲಿಯೂ ಸೌಹಾರ್ದತೆಯ ಬಂಧ ನಮ್ಮೆಲ್ಲರನ್ನು ಬೆಸೆದಿರಲಿ. ನನ್ನ ಎಲ್ಲ ಮುಸ್ಲಿಮ್ ಬಂಧುಗಳಿಗೆ ಈದ್ ಮುಬಾರಕ್
-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News