ರಾಜ್ಯಾದ್ಯಂತ ಸರಳ ಬಕ್ರೀದ್ ಆಚರಣೆ

Update: 2020-08-01 13:29 GMT

ಬೆಂಗಳೂರು, ಆ.1: ಕೊರೋನ ಆತಂಕದ ನಡುವೆಯೂ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ತ್ಯಾಗ, ಬಲಿದಾನದ ಹಬ್ಬವಾದ ಬಕ್ರೀದ್(ಈದುಲ್ ಅಝ್ ಹಾ) ಹಬ್ಬವನ್ನು ಮುಸ್ಲಿಮರು ಅತ್ಯಂತ ಸರಳವಾಗಿ ಆಚರಣೆ ಮಾಡಿದರು.

ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ಐತಿಹಾಸಿಕ ಹಿನ್ನೆಲೆಯಿಂದ ಹಬ್ಬಕ್ಕೆ ಪ್ರಾಣಿ ಬಲಿ ಕೊಡುವುದು ವಾಡಿಕೆ. ಬಲಿ ಅರ್ಪಿಸಿದ ಮಾಂಸವನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಬಡವರೂ ಸೇರಿದಂತೆ ಹಬ್ಬದ ಊಟದಿಂದ ಯಾರು ವಂಚಿತರಾಗಬಾರದು ಎಂಬುವುದು ಇದರ ಉದ್ದೇಶವಾಗಿದೆ. ಆದರೆ, ಕೊರೋನ ಭಯದ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕುರಿ, ಮೇಕೆಗಳನ್ನು ಬಲಿ ನೀಡಲಾಗಿದೆ. ಇನ್ನು, ಒಂಟೆಗಳ ಬಲಿಗೆ ಸರಕಾರ ನಿರ್ಬಂಧ ವಿಧಿಸಿದ್ದರ ಪರಿಣಾಮ ಎಲ್ಲಿಯೂ ಒಂಟೆ ಬಲಿ ನೀಡಿಲ್ಲ.

ಬೆಂಗಳೂರು ನಗರದ ಕಲಾಸಿಪಾಳ್ಯ, ಚಾಮರಾಜಪೇಟೆ, ಶಿವಾಜಿನಗರ, ಬಿಟಿಎಂ, ಪಾದರಾಯನಪುರ, ಹೆಬ್ಬಾಳ, ಆರ್‍ಟಿ ನಗರ, ಶಾಂತಿನಗರ, ಮೈಸೂರು ರಸ್ತೆ, ಜಯನಗರ ಸೇರಿದಂತೆ ರಾಜ್ಯದ ಪ್ರಮುಖ ಮಸೀದಿಗಳಲ್ಲಿ ಈದ್ ಸಾಮೂಹಿಕ ಪ್ರಾರ್ಥನೆ ಸರಕಾರದ ಆದೇಶದಂತೆ ಸೀಮಿತವಾಗಿ ನಡೆಯಿತು.

ಬೆಳಗ್ಗೆ 8 ಗಂಟೆಗೆ ನಡೆಯಬೇಕಿದ್ದ ನಮಾಝ್ ಗಳನ್ನು ಎಲ್ಲ ಮಸೀದಿಗಳಲ್ಲೂ ಬೆಳಗ್ಗೆ 7 ಗಂಟೆಯೊಳಗೆ ಸಾಮೂಹಿಕವಾಗಿ ನಿರ್ವಹಿಸಿದರು. ಮಸೀದಿಗೆ ಆಗಮಿಸುವವರನ್ನು ಮೊದಲು ಉಷ್ಣತೆ ಪರೀಕ್ಷಿಸಿ ಸ್ವವಿವರಗಳನ್ನು ಪಡೆಯಲಾಗುತ್ತಿತ್ತು. ಮಾಸ್ಕ್ ಧರಿಸಿದವರಿಗೆ ಮಾತ್ರ ಮಸೀದಿಯ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಬೆಂಗಳೂರಿನ ಜೆಪಿ ನಗರ ಹಾಗೂ ಕೆಲವು ಮಸೀದಿಗಳಲ್ಲಿ ನಮಾಝ್ ಗೆ ಬರುವವರಿಗೆ ಗುರುತು ಚೀಟಿಯನ್ನು ನೀಡಲಾಗಿತ್ತು. ಜಮಾಅತ್‍ನವರು ಅಲ್ಲದವರಿಗೆ ಮಸೀದಿಗೆ ಬರಲು ಅವಕಾಶ ನಿರಾಕರಿಸಲಾಗಿತ್ತು.

ಕೈ ಕುಲುಕುವುದು ಹಾಗೂ ಆಲಿಂಗನ ಮಾಡಲು ಅವಕಾಶವಿರಲಿಲ್ಲ. ನಮಾಝ್ ವೇಳೆ ಅಂತರ ಕಾಯ್ದುಕೊಳ್ಳಲಾಯಿತು. 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷಕ್ಕೂ ಹೆಚ್ಚಿನ ವಯಸ್ಸಿನವರಿಗೆ ಮಸೀದಿಗೆ ಬರಲು ಅವಕಾಶ ಇರಲಿಲ್ಲ.

ಒಂದು ಬಾರಿ 50 ಮಂದಿಗೆ ಮಾತ್ರ ನಮಾಝ್‍ಗೆ ಅವಕಾಶ ಇತ್ತು. ಹೆಚ್ಚು ಜನ ಇದ್ದಲ್ಲಿ ಎರಡು ಬಾರಿ ನಮಾಝ್‍ಗೆ ಅವಕಾಶ ನೀಡಲಾಯಿತು. ಸಾಮಾನ್ಯವಾಗಿ ಜಮಾತ್‍ನ ಕೇಂದ್ರ ಮಸೀದಿಗಳಲ್ಲಿ ಈದ್ ನಮಾಝ್ ನಡೆಯುತ್ತದೆ. ಆದರೆ ಈ ಭಾರಿ ಕೇಂದ್ರ ಮಸೀದಿಯ ಶಾಖಾ ಮಸೀದಿಗಳಲ್ಲೂ ನಮಾಝ್ ಗೆ ಅವಕಾಶ ಮಾಡಿಕೊಡಲಾಯಿತು.

ನಿಯಮ ಪಾಲನೆ: ಮಸೀದಿ ಹೊರತುಪಡಿಸಿ ಇತರ ಸ್ಥಳಗಳಾದ ಸಭಾಂಗಣ, ಸಮುದಾಯ ಭವನ, ಕಲ್ಯಾಣ ಮಂಟಪ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ವಿಧಿಸಲಾದ ನಿರ್ಬಂಧವನ್ನು ಪಾಲಿಸಲಾಯಿತು. ಇನ್ನೂ, ಸ್ಮಶಾನ ಮೈದಾನಕ್ಕೆ ನಿರ್ಬಂಧ ವಿಧಿಸದ ಕಾರಣ ಅಗಲಿದವರಿಗೆ ಕುಟುಂಬದ ಸದಸ್ಯರು ಸುರಕ್ಷಿತ ಅಂತರ ಕಾಪಾಡುವ ಮೂಲಕ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News