ಆ.2ರಂದು ರಾಜ್ಯದಲ್ಲಿ 'ಸಂಡೇ ಲಾಕ್‍ಡೌನ್' ಇಲ್ಲ

Update: 2020-08-01 15:00 GMT

ಬೆಂಗಳೂರು, ಆ. 1: `ರವಿವಾರದ ಲಾಕ್‍ಡೌನ್'ಗೆ ರಾಜ್ಯ ಸರಕಾರ ಬ್ರೇಕ್ ಹಾಕಿದ್ದು, ಆಸ್ಪತ್ರೆ, ಹಾಲು, ಔಷಧ ಅಂಗಡಿಗಳು, ದಿನಸಿ ವಸ್ತುಗಳು ಹಾಗೂ ಅಗತ್ಯ ಸೇವೆಗಳು ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ ಸೇರಿದಂತೆ ಯಾವುದೇ ವಾಹನ ಸಂಚಾರಕ್ಕೆ ರಾಜ್ಯಾದ್ಯಂತ ಇನ್ನು ನಿರ್ಬಂಧ ಇರುವುದಿಲ್ಲ.

ಕೇಂದ್ರ ಸರಕಾರ ಇತ್ತೀಚೆಗೆ ಆನ್‍ಲಾಕ್-3 ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದ್ದು, ರಾತ್ರಿ ಕರ್ಫ್ಯೂವನ್ನು ತೆರವು ಮಾಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಕರು ಯಾವುದೇ ರೀತಿಯ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ನೆರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಬೇಕು.

ರವಿವಾರ ರಾಜ್ಯಾದ್ಯಂತ ಜಾರಿಯಲ್ಲಿದ್ದ ಲಾಕ್‍ಡೌನ್ ಹಾಗೂ ರಾತ್ರಿ ಕರ್ಫ್ಯೂ ತೆರವು ಮಾಡಿರುವ ಹಿನ್ನೆಲೆಯಲ್ಲಿ ಆ.1ರ ರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ಸಾರಿಗೆ ವಾಹನಗಳನ್ನು ವಾರದ ಎಲ್ಲ ದಿನಗಳಲ್ಲಿ ಹಾಗೂ ರಾತ್ರಿ ಸಾರಿಗೆ ವ್ಯವಸ್ಥೆ ಯಾತಾಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ಆನ್‍ಲಾಕ್-3 ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ಆ.5ರಿಂದ ತೆರೆಯಬಹುದಾಗಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯ. ಸೋಂಕು ತಡೆಗಟ್ಟಲು ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News