ಆಯುರ್ವೇದ ತಜ್ಞ ಡಾ. ಗಿರಿಧರ ಕಜೆಗೆ ಬಿಎಂಸಿಆರ್‍ಐನಿಂದ ನೋಟಿಸ್

Update: 2020-08-01 15:55 GMT
ಡಾ. ಗಿರಿಧರ ಕಜೆ

ಬೆಂಗಳೂರು, ಆ.1: ಕೊರೋನ ಸೋಂಕಿಗೆ ಔಷಧ ಸಂಬಂಧ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವರಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‍ಐ) ನೋಟಿಸ್ ನೀಡಿದ್ದು, ತಕ್ಷಣವೇ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.

ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವರ ಆಯುರ್ವೇದ ಔಷಧ ಇನ್ನೂ ಕ್ಲಿನಿಕಲ್ ಟ್ರಯಲ್‍ನ ಪ್ರಾಥಮಿಕ ಹಂತದಲ್ಲಿದೆ. ಆದರೆ, ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ ಎಂದು ಹೇಳಿಕೆ ನೀಡಿರುವುದಕ್ಕೆ ಬಿಎಂಸಿಆರ್‍ಐ ಆಕ್ಷೇಪ ವ್ಯಕ್ತಪಡಿಸಿದ್ದು, ಕೋವಿಡ್ ರೋಗಕ್ಕೆ ಆಯುರ್ವೇದ ಔಷಧ ಬಳಕೆ ಕುರಿತು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಕೊರೋನದಂತಹ ಸಂಕಷ್ಟ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮುನ್ನ ಸೂಕ್ತ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿರಬೇಕೆಂಬುದು ನಿಮಗೆ ತಿಳಿದಿದೆ. ಆದರೂ ಇಂತಹ ಸಂದರ್ಭದಲ್ಲೂ ನೀವು ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ, ಈ ಕುರಿತು ತಕ್ಷಣ ಸ್ಪಷ್ಟೀಕರಣ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಎಂಆರ್‍ಸಿಐ ಎಚ್ಚರಿಸಿದೆ.

ಇತ್ತೀಚೆಗೆ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವರು ಕೇಂದ್ರ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಹತ್ತು ಕೊರೋನ ಸೋಂಕಿತರ ಮೇಲೆ ಪ್ರಯೋಗ ನಡೆಸಿದ್ದರು. ಕೇವಲ 9 ದಿನದಲ್ಲಿ ಎಲ್ಲರೂ ಗುಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ಬಿಎಂಸಿಆರ್‍ಐ ನೋಟಿಸ್ ಜಾರಿಗೊಳಿಸಿದ ಬೆನ್ನೆಲ್ಲೇ ಡಾ.ಗಿರಿಧರ ಕಜೆ ಅವರು, ಆ.2ರಂದು(ರವಿವಾರ) ಸಂಜೆ 6ಕ್ಕೆ ಫೇಸ್‍ಬುಕ್ ಲೈವ್‍ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News