20 ದಿನದೊಳಗೆ ಸಿಇಟಿ ಫಲಿತಾಂಶ: ಡಿಸಿಎಂ ಅಶ್ವತ್ಥ ನಾರಾಯಣ

Update: 2020-08-01 16:25 GMT

ಬೆಂಗಳೂರು, ಆ.1: ಕೋವಿಡ್ ಆತಂಕದ ನಡುವೆಯು ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಇನ್ನು 15ರಿಂದ 20ದಿನದೊಳಗೆ ಸಿಇಟಿ ಫಲಿತಾಂಶ ಬರಲಿದೆ. ಈ ವರ್ಷ ಕೌನ್ಸಲಿಂಗ್ ಸೇರಿದಂತೆ ಎಲ್ಲವನ್ನು ಆನ್‍ಲೈನ್‍ನಲ್ಲಿಯೇ ಮಾಡಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಆನ್‍ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ದಿನದ ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೊರೋನ ಸೋಂಕಿತ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 1,94,419 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಭೌತವಿಜ್ಞಾನಕ್ಕೆ ಶೇ.90.23ರಷ್ಟು ಹಾಗೂ ರಾಸಾಯನ ವಿಜ್ಞಾನಕ್ಕೆ ಶೇ.90.9 ಹಾಜರಾತಿ ಇತ್ತೆಂದು ತಿಳಿಸಿದ್ದಾರೆ.

ಹೆಲ್ಪ್ ಲೈನ್ ನೆರವು: ಸಿಇಟಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ. ಸಿಇಟಿ ಹೆಲ್ಪ್‍ಲೈನ್‍ಗೆ ಗುರುವಾರ 200ಕ್ಕೂ ಹೆಚ್ಚು ಕರೆಗಳು ಬಂದಿದ್ದವು. ಅದರಲ್ಲಿ 10ರಿಂದ 15 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮನವಿ ಮಾಡಿದರು. ಪರೀಕ್ಷಾ ಪ್ರಾಧಿಕಾರ ಅವರಿಗೆ ನೆರವಾಗಿದೆ.

ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಕಾರಣರಾದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಶಿಕ್ಷಣ, ಬಿಬಿಎಂಪಿ, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಕೃತಜ್ಞತೆ ಸಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News