ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ: ಮಾನವ ಹಕ್ಕು ಆಯೋಗಕ್ಕೆ ದಾಖಲೆ ನೀಡುವೆ- ಎಚ್.ಕೆ.ಪಾಟೀಲ್

Update: 2020-08-01 17:05 GMT

ಬೆಂಗಳೂರು, ಆ. 1: ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ, ರೋಗಿಗಳಿಗೆ ಸಕಾಲದಲ್ಲಿ ದೊರೆಯದ ಆಂಬ್ಯುಲೆನ್ಸ್ ಸೇವೆ ಹಾಗೂ ಗೌರವಯುತ ಅಂತ್ಯಸಂಸ್ಕಾರ ವ್ಯವಸ್ಥೆ ಕಲ್ಪಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಕೋರಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಸಲ್ಲಿಸಿದ್ದ ದೂರನ್ನು ಆಧರಿಸಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.

ಜು.10ರಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ `ಗೌರವಯುತ ಶವಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಸಕಾಲಕ್ಕೆ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವ ಅನುಕೂಲತೆ ಮತ್ತು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವೆ ನಮ್ಮ ಮಾನವ ಹಕ್ಕುಗಳಲ್ಲವೇ? ಈ ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜಾಸತ್ತಾತ್ಮಕ ಕರ್ತವ್ಯ ಹೊಂದಿರುವ ಸರಕಾರವೇ ಇವುಗಳ ಉಲ್ಲಂಘನೆಯ ಬಗ್ಗೆ ಸುಮ್ಮನೆ ಕುಳಿತಿರುವುದು ಜನವಿರೋಧಿ ಕ್ರಮ' ಎಂದು ಆಯೋಗದ ಗಮನ ಸೆಳೆದಿದ್ದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

`ರಾಜ್ಯದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸರಕಾರದ ನಿಷ್ಕ್ರಿಯವಾಗಿದ್ದು, ಸ್ಪಷ್ಟ ನಿಲುವುಗಳ ಕೊರತೆ, ಪ್ರಾಮಾಣಿಕ ಪ್ರಯತ್ನದ ಕೊರತೆ, ಸರಕಾರದಲ್ಲಿ ಇಲ್ಲದಿರುವ ಸಮನ್ವಯತೆಗಳಿಂದಾಗಿ ಅದರ ಜೊತೆ-ಜೊತೆ ಎಲ್ಲಿ ನೋಡಿದಲ್ಲಿ ಭ್ರಷ್ಟಾಚಾರದ ವಾಸನೆಗಳಿಂದಾಗಿ ಜನರಿಗೆ ಆಸ್ಪತ್ರೆಯಲ್ಲಾಗಲಿ, ಕೋವಿಡ್ ಕೇಂದ್ರಗಳಲ್ಲಾಗಲಿ ಅಥವಾ ಆಂಬುಲೆನ್ಸ್ ಸೇವೆಯಲ್ಲಾಗಲಿ ಸಮರ್ಪಕ ಸೇವೆ ಇಲ್ಲದಾಗಿದೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದೇನೆ ಎಂದು ತಿಳಿಸಿದ್ದಾರೆ.

ಜು.27ರಂದು ಸಭೆ ಸೇರಿದ ಮಾನವ ಹಕ್ಕುಗಳ ಆಯೋಗದ ಪೂರ್ಣಪೀಠ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದೆ. ಆ.3 ಅಥವಾ ಆ.4ರಂದು ಆಯೋಗ ಬಯಸಿದರೆ ನಾನೇ ಖುದ್ದು ಹಾಜರಾಗಿ ಈಗಾಗಲೇ ನೀಡಲಾಗಿರುವ ದಾಖಲೆಗಳು ಮತ್ತು ಪೆನ್‍ಡ್ರೈವ್ ಜೊತೆಗೆ ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳಲಿದ್ದೇನೆ ಎಂದು ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News