ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ವರ್ಗಾವಣೆಗೆ ಅವಕಾಶ

Update: 2020-08-01 17:29 GMT

ಬೆಂಗಳೂರು, ಆ.1: ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವರ್ಗಾವಣೆ ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮೋದಿಸಿದೆ.

ಈ ಕುರಿತಂತೆ ರಾಜ್ಯದ ಎಲ್ಲ ಉಪನಿರ್ದೇಶಕರುಗಳಿಗೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಇಲಾಖೆ, ಕರ್ನಾಟಕ ಶಿಕ್ಷಣ ಕಾಯ್ದೆ-1983ರಡಿಯಲ್ಲಿ ರಚಿಸಲಾಗಿರುವ ನಿಯಮದಂತೆ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಅದೇ ಸಂಸ್ಥೆಯಿಂದ ನಡೆಯುತ್ತಿರುವ ಮತ್ತೊಂದು ಅನುದಾನಿತ ಶಾಲೆಗೆ ಅಥವಾ ಒಂದು ಸಂಸ್ಥೆಯ ಅನುದಾನಿತ ಶಿಕ್ಷಕರುಗಳನ್ನು ಮತ್ತೊಂದು ಅನುದಾನಿತ ಶಾಲೆಯಲ್ಲಿನ ಖಾಲಿ, ಪರಸ್ಪರ ಹುದ್ದೆಗಳಿಗೆ ವರ್ಗಾಯಿಸಲು ಕೋರಿ ಸಂಸ್ಥೆಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಶಿಕ್ಷಕರ ಮಕ್ಕಳ ಅನುಪಾತ 1:40 ಅನುಗುಣವಾಗಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.

ಶಿಕ್ಷಕರ ಅವಶ್ಯಕತೆಯ ಬಗ್ಗೆ ಅನುದಾನಿತ ಶಾಲೆಗಳ ಆಡಳಿತ ಮಂಡಳಿಗಳು ಎಲ್ಲ ದೃಢೀಕೃತ ದಾಖಲೆಗಳ ಸಹಿತ ಸ್ಪಷ್ಟವಾದ ಶಿಫಾರಸ್ಸಿನೊಂದಿಗೆ ಸೆಪ್ಟೆಂಬರ್ 30 ಅಥವಾ ಶಾಲೆ ಪ್ರಾರಂಭವಾಗುವವರೆಗೆ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪನಿರ್ದೇಶಕರಿಗೆ ಸ್ವೀಕೃತವಾದ 5 ದಿನಗಳೊಳಗಾಗಿ ಸಲ್ಲಿಸಬೇಕು. ಉಪ ನಿರ್ದೇಶಕರು ಸೂಕ್ತ ಶಿಫಾರಸ್ಸಿನೊಂದಿಗೆ ಆಯುಕ್ತರ, ಅಪರ ಆಯುಕ್ತರ ಕಚೇರಿಗೆ ಸ್ವೀಕೃತವಾದ 7 ದಿನಗಳೊಳಗಾಗಿ ಸಲ್ಲಿಸುವಂತೆ ತಿಳಿಸಿದೆ.

-ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಎರಡು ಶಾಲೆಗಳಲ್ಲಿ ಅನುದಾನ ಸಹಿತವಾಗಿ ಮಂಜೂರಾದ ಹುದ್ದೆ, ಕರ್ತವ್ಯ ಹಾಗೂ ಖಾಲಿ ಹುದ್ದೆ ವಿವರ ಸಲ್ಲಿಸಬೇಕು.

-ಎರಡು ಶಾಲೆಗಳಲ್ಲಿನ ಎಸ್‍ಎಟಿಎಸ್ ಪ್ರಕಾರ ಮಕ್ಕಳ ದಾಖಲಾತಿ.

-ಎರಡೂ ಆಡಳಿತ ಮಂಡಳಿಗ ಒಪ್ಪಿಗೆ ಪತ್ರ.

-ವರ್ಗಾವಣೆ ಬಯಸಿರುವ ಶಿಕ್ಷಕರ ಒಪ್ಪಿಗೆ ಪತ್ರ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News