ಕೊರೋನ ವ್ಯಾಪಿಸಲು ಸರ್ಕಾರದ ವೈಫಲ್ಯ ಕಾರಣ: ರಮಾನಾಥ ರೈ ಆರೋಪ

Update: 2020-08-01 17:33 GMT

ಮಡಿಕೇರಿ, ಆ.1: ಕೊರೋನ ವ್ಯಾಪಿಸಿದ ಆರಂಭದ ದಿನಗಳಲ್ಲಿ ರಾಷ್ಟ್ರದಲ್ಲಿ 560 ಪ್ರಕರಣಗಳು ಕಂಡು ಬಂದಿದ್ದರೆ, ರಾಜ್ಯದಲ್ಲಿ ಕೇವಲ ಒಂದು ಪ್ರಕರಣವಿತ್ತು. ಪ್ರಸ್ತುತ ದೇಶವ್ಯಾಪಿ ಸೋಂಕಿನಿಂದ 36,500 ಮಂದಿ ಸಾವನ್ನಪ್ಪಿದ್ದರೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 2 ಸಾವಿರದ ಗಡಿ ಮೀರಿದೆ. ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣವೆಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ತಯಾರಿ ಮತ್ತು ಮುಂದಾಲೋಚನೆಗಳಿಲ್ಲದೆ ನಡೆಸಿದ ಲಾಕ್ ಡೌನ್‍ನಿಂದ ಸೋಂಕು ವ್ಯಾಪಿಸಿದೆ. ಅಲ್ಲದೆ ಸೋಂಕಿತರ ನಿರ್ವಹಣೆಯಲ್ಲೂ ಸರ್ಕಾರ ಸೋತಿದೆ. ಲಾಕ್ ಡೌನ್ ನಂತರ ದೇಶವನ್ನು ಹೇಗೆ ಮುನ್ನಡೆಸಬೇಕೆನ್ನುವ ಚಿಂತನೆಯನ್ನೇ ಮಾಡದ ಕೇಂದ್ರ ಸರ್ಕಾರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಟೀಕಿಸಿದರು. 

ತನಿಖೆಗೆ ಆಗ್ರಹ
ಕೊರೋನ ಸಂಕಷ್ಟದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟಗಳನ್ನು ನಡೆಸುವ ಹಂತದಲ್ಲಿ ರಾಜ್ಯದ ಬಿಜೆಪಿ ಸರ್ಕಾರ, ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಚಾರವನ್ನು ಎಸಗಿದೆ. ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಲೇಬೇಕೆಂದು ರಮಾನಾಥ ರೈ ಒತ್ತಾಯಿಸಿದರು.

ಕೇಂದ್ರದ ಮಾರ್ಗಸೂಚಿಯಂತೆ ಒಂದು ವೆಂಟಿಲೇಟರ್ ದರ 4 ಲಕ್ಷವಾಗಿದ್ದರೆ ರಾಜ್ಯ ಸರ್ಕಾರ 18 ಲಕ್ಷಗಳ ವರೆಗೆ ವಿವಿಧ ದರಗಳಲ್ಲಿ ಇದನ್ನು ಖರೀದಿ ಮಾಡಿದೆ. ವೈದ್ಯರುಗಳೆ ಸಂಕಷ್ಟಕೆ ಸಿಲುಕುವಂತೆ ಕಳಪೆ ಪಿಪಿಇ ಕಿಟ್‍ಗಳ ಖರೀದಿ, ಕೇವಲ 50 ರೂ. ಬೆಲೆಯ ಮಾಸ್ಕ್ ಗಳನ್ನು 126 ರೂ.ಗಳಿಂದ 150 ರೂ.ಗಳಿಗೆ ಹಾಗೂ 2 ರಿಂದ 3 ಸಾವಿರ ಮೌಲ್ಯದ ಸ್ಕ್ಯಾನರ್ ಗಳನ್ನು 9 ಸಾವಿರ ರೂ.ಗಳಿಗೆ, ಆಕ್ಸಿ ಮೀಟರ್ ಗಳನ್ನು ನೆರೆಯ ಕೇರಳ 2.85 ಲಕ್ಷಕ್ಕೆ ಖರೀದಿಸಿದರೆ ರಾಜ್ಯ ಸರ್ಕಾರ 4.36 ಲಕ್ಷ ರೂ.ಗಳಿಗೆ ಖರೀದಿಸುವ ಮೂಲಕ ವ್ಯಾಪಕ ಭ್ರಷ್ಟಾಚಾರವನ್ನು ನಡೆಸಿದೆ.

ಉಪಕರಣಗಳ ಖರೀದಿಯ ಬಗ್ಗೆ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಪ್ರಶ್ನೆಗಳನ್ನೆತ್ತಿದ್ದ ಸಂದರ್ಭ ಆರಂಭದಲ್ಲಿ ಸಾಮಗ್ರಿ ಖರೀದಿಗೆ 324 ಕೊಟಿ ಎಂದ ಸರ್ಕಾರ, ಪ್ರಸ್ತುತ 4 ಸಾವಿರ ಕೋಟಿ ವೆಚ್ಚವಾಗಿದೆ ಎನ್ನುತ್ತಿದೆ. ಇಂತಹ ಗಂಭೀರ ವಿಚಾರದ ಬಗ್ಗೆ ತನಿಖೆಗೆ ಮುಂದಾದ ಸದನ ಸಮಿತಿಗೆ ತನಿಖೆ ನಡೆಸಲು ಅವಕಾಶ ಒದಗಿಸದೆ, ಅದನ್ನು ನಿಲ್ಲಿಸುವ ಕಾರ್ಯ ನಡೆದಿರುವುದಾಗಿ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಹಲವು ಪ್ರಕರಣಗಳ ತನಿಖೆ ನಡೆಸುವ ಮೂಲಕ ಜನರ ಸಂಶಯಗಳನ್ನು ನಿವಾರಿಸಲು ಮುಂದಾಗಿತ್ತು. ಆದರೆ, ಈಗಿನ ಬಿಜೆಪಿ ತನ್ನ ವಿರುದ್ಧ ಗಂಭೀರ ಆರೋಪಗಳು ಬಂದರೂ ತನಿಖೆಗೆ ಒಪ್ಪಿಸಲು ಮುಂದಾಗುತ್ತಿಲ್ಲ. ಇದುವೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವೆಂದು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಕಾಂಗ್ರೆಸ್ ಹೋರಾಟ ನಡೆಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋರಾಟದ ನೇತೃತ್ವ ವಹಿಸಲಿದ್ದಾರೆ. ಪ್ರತೀ ಜಿಲ್ಲೆಯಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರಬಲ ಹೋರಾಟ ಕೈಗೊಳ್ಳಲಿದೆ ಎಂದರು. 

ಮಾಜಿ ಸಂಸದ ಧ್ರುವ ನಾರಾಯಣ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ ಪೂರ್ಣ ಬೆಂಬಲವನ್ನು ನೀಡುತ್ತಲೇ ಬಂದಿದೆ. ಹೀಗಿದ್ದೂ ಕೋವಿಡ್ ಸಾಂಕ್ರಾಮಿಕದ ಸಂದರ್ಭ ರಾಜ್ಯ ಸರ್ಕಾರದಿಂದ ನಡೆದ ವ್ಯಾಪಕ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಕೆಲಸವನ್ನೂ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು. 

ಕರ್ನಾಟಕದಲ್ಲಿ ಆರೋಗ್ಯ ಸಚಿವರು ಯಾರು ಎಂಬುದೇ ತಿಳಿಯುತ್ತಿಲ್ಲ. ನೆರೆಯ ಕೇರಳದಲ್ಲಿ ಆರೋಗ್ಯ ಸಚಿವೆಯಾಗಿರುವ ಶೈಲಜಾ ಅವರನ್ನು ಸರ್ವೋಚ್ಚ  ನ್ಯಾಯಾಲಯ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಶಂಸಿಸಿದೆ. ಆದರೆ, ಕರ್ನಾಟಕದಲ್ಲಿ ಶ್ರೀರಾಮಲು, ಡಾ.ಸುಧಾಕರ್, ಸುರೇಶ್ ಕುಮಾರ್, ಆರ್.ಅಶೋಕ್ ಎಲ್ಲರೂ ಆರೋಗ್ಯ ಸಚಿವರಂತೆ ಹೇಳಿಕೆ ನೀಡುತ್ತಾ ಗೊಂದಲವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮಂಜುಳಾ ರಾಜ್, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ರಾಜ ಕಾಂಗ್ರೆಸ್‍ನ ಕಾನೂನು ಘಟಕದ ನೂತನ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಣ್ಣ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News