×
Ad

ಜಿಎಸ್‍ಟಿ ಪಾಲು ಕೇಳದ ಮುಖ್ಯಮಂತ್ರಿ, ಸಚಿವರು ಜನರಿಗೆ ಮೋಸ ಮಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

Update: 2020-08-01 23:50 IST

ಬೆಂಗಳೂರು, ಆ.1: ರಾಜ್ಯ ಸರಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯದ ಪಾಲಿನ ಜಿಎಸ್‍ಟಿ ಪರಿಹಾರದ ಹಣವನ್ನು ನೀಡಲು ಹಿಂದೇಟು ಹಾಕಿದೆ. ನಮಗೆ ಸಲ್ಲಬೇಕಾದ ಹಣ ನೀಡದೆ, ರಾಜ್ಯವನ್ನ ಬೀದಿಗೆ ಹಾಕುವುದು ಪ್ರಧಾನಿಯವರು ಹೇಳಿದ ಆತ್ಮನಿರ್ಭರತೆಯಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಟ್ವೀಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲನ್ನು ಪಡೆದುಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿ. ಆದರೆ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದೇ, ರಾಜ್ಯದ ಮುಖ್ಯಮಂತ್ರಿ, ಸಚಿವರು ಜನರಿಗೆ ಮೋಸ ಮಾಡುತ್ತಿದ್ದಾರೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 9000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳೂ ಸಹ ಬಜೆಟ್‍ನಲ್ಲಿ ಉಲ್ಲೇಖ ಮಾಡಿದ್ದರು. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಈ ವಿಚಾರವಾಗಿ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಯಾರೊಬ್ಬರಿಗೂ ಇಲ್ಲವೇ? ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ದೆಹಲಿಗೆ ಓಡುವ ಬಿಜೆಪಿ ನಾಯಕರು, ರಾಜ್ಯದ ಹಕ್ಕಿಗಾಗಿ ಹೋರಾಡುವುದಕ್ಕೆ ಪುರಸೊತ್ತಿಲ್ಲವಾ? ಎಂದು ಬಿಜೆಪಿ ಸಂಸದರು, ಸರಕಾರದ ಸಚಿವರನ್ನು ಪ್ರಶ್ನಿಸಿದ್ದಾರೆ.

ಕೊರೋನದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದರ ನಡುವೆ ಕೇಂದ್ರ ಸರಕಾರವು ಜಿಎಸ್‍ಟಿ ಪರಿಹಾರದ 2 ಕಂತನ್ನು ರಾಜ್ಯಕ್ಕೆ ನೀಡಲು ಸಾಧ್ಯವಿಲ್ಲ ಎಂದಿದೆ. 15 ನೇ ಹಣಕಾಸು ಆಯೋಗದಿಂದ ರಾಜ್ಯದ ತೆರಿಗೆ ಪಾಲಿನಲ್ಲಿ 9,000 ಕೋಟಿ ರೂ. ಖೋತಾ ಮಾಡಿದೆ. ತನ್ನ ಪ್ರಾಯೋಜಿತ ರಾಜ್ಯ ಯೋಜನೆಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News