ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

Update: 2020-08-01 18:23 GMT

ಬೆಂಗಳೂರು, ಆ. 1: ಬಿಜೆಪಿಯ ನೂತನ ರಾಜ್ಯ ಉಪಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿ ಜಗನ್ನಾಥ ಭವನಕ್ಕೆ ಶನಿವಾರ ಭೇಟಿ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಶನಿವಾರ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಸ್ಥಾನಮಾನದ ಆಸೆಯನ್ನಿಟ್ಟುಕೊಂಡು ಪಕ್ಷದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಮುಂದಿನ ದಿನದಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದರು.

ಪಕ್ಷ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಮುಂಬರುವ ದಿನದಲ್ಲಿ ಪಕ್ಷವನ್ನು ಸಂಘಟನೆ ಕಾರ್ಯವನ್ನು ಮಾಡುತ್ತೇನೆ. ಪಕ್ಷ ನೀಡಿರುವ ಹೊಣೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುವೆ. ಪಕ್ಷದ ರಾಜ್ಯ ಉಪಾಧ್ಯಕ್ಷನನ್ನಾಗಿ ಘೋಷಣೆ ಮಾಡಿರುವುದು ನನಗೆ ಸಂತೋಷ ತಂದಿದೆ. ನನ್ನನ್ನು ಗುರುತಿಸಿ ಹೊಸ ಜವಾಬ್ದಾರಿಯನ್ನು ವಹಿಸಿದೆ ಎಂದು ತಿಳಿಸಿದರು.

ನನಗೆ ಈ ಹೊಣೆ ನೀಡಿದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಎಲ್ಲ ನಾಯಕರ ಆರ್ಶೀವಾದದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ವಿಜಯೇಂದ್ರ ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಇದೀಗ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನದ ಮಹತ್ವದ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಲಾಗಿದೆ. ಇದಕ್ಕಾಗಿ ಪಕ್ಷದ ವರಿಷ್ಠ ಮಂಡಳಿಗೆ ನಾನೆಂದೂ ಅಭಾರಿ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರ, ಜನರ ಆಶೀರ್ವಾದ ಮಾತ್ರ ನನ್ನ ಮುಂದಿನ ಹೆಜ್ಜೆಗಳಿಗೆ ಯಶಸ್ಸಿನ ಮೆಟ್ಟಿಲಾಗಬಲ್ಲದು'

-ವಿಜಯೇಂದ್ರ ಯಡಿಯೂರಪ್ಪ, ಬಿಜೆಪಿ ನೂತನ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News