ಚಿಕ್ಕಮಗಳೂರು: 56 ಮಂದಿಗೆ ಕೊರೋನ ದೃಢ; ಸಾವಿರ ದಾಟಿದ ಸೋಂಕಿತರ ಸಂಖ್ಯೆ

Update: 2020-08-01 18:46 GMT

ಚಿಕ್ಕಮಗಳೂರು, ಆ.1: ಕಾಫಿನಾಡಿನಲ್ಲಿ ಶನಿವಾರ 56 ಮಂದಿಯಲ್ಲಿ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದ್ದು, ಈ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಇದುವರೆಗೂ ವರದಿಯಾದ ಸೋಂಕಿತರ ಸಂಖ್ಯೆ 1ಸಾವಿರ ಮೀರಿದಂತಾಗಿದೆ.

ಶನಿವಾರ ಚಿಕ್ಕಮಗಳೂರು ತಾಲೂಕಿನಲ್ಲಿ 30 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಕಡೂರು ತಾಲೂಕಿನಲ್ಲಿ 9, ತರೀಕೆರೆ ತಾಲೂಕಿನಲ್ಲಿ 8, ಅಜ್ಜಂಪುರ 5, ನರಸಿಂಹರಾಜಪುರ 3 ಹಾಗೂ ಮೂಡಿಗೆರೆಯಲ್ಲಿ 1 ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಸೋಂಕಿತರನ್ನು ನಗರದ ಕೋವಿಡ್-19 ಚಿಕಿತ್ಸಾ ಕೇಂದ್ರಗಳಿಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ಆರಂಭಿಸಲಾಗಿದೆ. ಸೋಂಕಿತರ ಸಂಪರ್ಕಗಳನ್ನು ಪತ್ತೆಗೆ ಜಿಲ್ಲಾಡಳಿತ ಕ್ರಮವಹಿಸಿದ್ದು, ಸೋಂಕಿತರು ಪತ್ತೆಯಾದ ಮನೆಗಳನ್ನು ಸೀಲ್‍ಡೌನ್ ಮಾಡಿ, ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ. ಸೋಂಕು ಪತ್ತೆಯಾದ ಪ್ರದೇಶಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್ ಗಳನ್ನು ಘಟನಾ ಕಮಾಂಡರ್ ಗಳನ್ನಾಗಿ ನೇಮಕ ಮಾಡಲಾಗಿದೆ.

ಶನಿವಾರ ಜಿಲ್ಲೆಯಲ್ಲಿ ವರದಿಯಾಗಿರುವ 56 ಪಾಸಿಟಿವ್ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ವರದಿಯಾಗಿರುವ ಸೋಂಕಿತರ ಸಂಖ್ಯೆ 1046ಕ್ಕೇರಿದೆ. ಇದುವರೆಗೆ ಸೋಂಕಿನಿಂದ ಗುಣಮುಖರಾದ 440 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಸದ್ಯ 585 ಸಕ್ರೀಯ ಪ್ರಕರಣಗಳಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಸೋಂಕಿಗೆ ತುತ್ತಾದ 21 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News