ರಾಜಕೀಯ ದುರುದ್ದೇಶದಿಂದ ಡಿಕೆಶಿ ವಿರುದ್ಧ ಕೇಸ್: ಸಿದ್ದರಾಮಯ್ಯ

Update: 2020-08-01 19:05 GMT

ಮೈಸೂರು,ಆ.1: ಹುಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ. ನಾನು ಯಡಿಯೂರಪ್ಪರ ಹಳೆ ಕೇಸ್ ಬಗ್ಗೆ ಮಾತನಾಡಲ್ಲ ಎಂದು ಮಾಜಿ ಸಿಎಂ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಶಾರದಾದೇವಿನಗರ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ವಾಚ್ ವಿಚಾರ ಮುಗಿದು ಹೋಗಿದೆ. ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ಸು ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ದೇನಾ ? ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿಲ್ಲ. ಅದನ್ನು ಯಾರೋ ಕೊಟ್ಟಿದ್ದರು. ಅದಕ್ಕೆ ಅವರು ಅಫಿಡವಿಟ್ ಕೊಟ್ಟಿದ್ದಾರೆ. ಈಗ ಅದನ್ನು ಮತ್ಯಾಕೆ ತೆಗಿದಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ. ನಾನು ವಾಚ್ ಪ್ರಕರಣದ ಬಗ್ಗೆ ಮಾತನಾಡಲ್ಲ ಎಂದರು.

ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್ ಪಕ್ಕದಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇವರಿಗೇನು ಬಹಳ ನೈತಿಕತೆ ಇದೆಯಾ? ನಾನೀಗ ಅದರ ಬಗ್ಗೆ ಮಾತನಾಡಲ್ಲ. ಡಿ.ಕೆ.ಶಿವಕುಮಾರ್ ತಪ್ಪಿತಸ್ಥ ಅಂತ ಕೋರ್ಟ್ ನಲ್ಲಿ ತೀರ್ಮಾನ ಆಗಿದೆಯಾ? ಅದು ರಾಜಕೀಯ ದುರುದ್ದೇಶದಿಂದ ಹಾಕಿರುವ ಕೇಸ್. ಅವರಿಗೆ ಜಾಮೀನು ಕೊಟ್ಟಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ. ಈ ಸಂದರ್ಭದಲ್ಲಿ ಅದರ ಅವಶ್ಯಕತೆ ಇಲ್ಲ ಎಂದರು.

ಭ್ರಷ್ಟಾಚಾರ ಆರೋಪಕ್ಕೆ ನೋಟೀಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ ನೊಟೀಸ್ ಬಂಡವಾಳ ನನಗೆ ಗೊತ್ತಿಲ್ವಾ? ನಾನು ಲಾಯರ್. ನೊಟೀಸ್ ಬಗ್ಗೆ ನನಗೆ ಗೊತ್ತಿಲ್ವಾ? ನಾನೇನು ನೊಟೀಸ್‍ಗೆ ಹೆದರಲ್ಲ. ಅವನ್ಯಾರೋ ನೊಟೀಸ್ ಕೊಟ್ಟಿದ್ದಾನೆ. ನಾನು ಆರೋಪ ಮಾಡಿರುವುದು ಸರ್ಕಾರದ ಮೇಲೆ. ಯಾರೋ ನೊಟೀಸ್ ಕೊಟ್ಟರೆ ಏನು ಪ್ರಯೋಜನ ಎಂದರು.

ಸಿದ್ದರಾಮಯ್ಯನವರ ಜೊತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಮರಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News