ಸರಕಾರಕ್ಕೆ ಭ್ರಷ್ಟಾಚಾರದ ಸೊಂಕು ತಗುಲಿದೆ: ಶಾಸಕ ಪ್ರಿಯಾಂಕ್ ಖರ್ಗೆ

Update: 2020-08-02 14:24 GMT

ಕಲಬುರಗಿ, ಆ. 2: ರಾಜ್ಯದಲ್ಲಿ ಕೊರೋನ ಸೋಂಕು ಬಂದು ನಾಲ್ಕು ತಿಂಗಳು ಕಳೆದರೂ ಇನ್ನೂ ಸರಕಾರ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಸರಕಾರಕ್ಕೆ ಮಾರಕ ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ಸೋಂಕು ತಗುಲಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನದಂತಹ ಸಂದಿಗ್ಧ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಿದೆ. ಕೇಂದ್ರ ಸರಕಾರ ನಾಲ್ಕು ಬಾರಿ ಲಾಕ್‍ಡೌನ್ ಮಾಡಿ ದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕಿದ್ದ ರಾಜ್ಯ ಸರಕಾರ ಹಣ ಲೂಟಿ ಮಾಡುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ವೈದ್ಯಕೀಯ ಸಲಕರಣೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಷ್ಟ್ರದಲ್ಲಿಯೇ ಮೊದಲ ಸಾವು ಸಂಭವಿಸಿದ್ದು ಕಲಬುರಗಿ ನಗರದಲ್ಲಿ. ಆದರೆ, ಈವರೆಗೂ ಕೇವಲ ಒಂದೇ ಒಂದು ಕೊರೋನ ಸೋಂಕು ತಪಾಸಣೆ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಈ ಮೊದಲು ಹಲವು ಬಾರಿ ನಾನು ಇಎಸ್‍ಐಸಿಯಲ್ಲಿ ಒಂದು ಪರೀಕ್ಷಾ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ. ಆದರೂ ಫಲಪ್ರದವಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 5 ಸಾವಿರ ವರದಿಗಳು ಬರುವುದು ಬಾಕಿ ಉಳಿದಿವೆ. ಇದು ತಕ್ಷಣದ ಚಿಕಿತ್ಸೆ ನೀಡಲು ಸಮಸ್ಯೆಯಾಗಿದೆ. ಈ ವಿಚಾರವು ಸರಕಾರಕ್ಕೆ ಯಾಕೆ ತಿಳಿಯುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಜಿಮ್ಸ್ ಹಾಗೂ ಇಎಸ್‍ಐಯಲ್ಲಿ ಎಷ್ಟು ಔಷಧಿ ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿ ಯಾರೂ ಒದಗಿಸುತ್ತಿಲ್ಲ. 3 ಸಾವಿರ ರೂ.ಗಳಿಗೆ ದೊರಕುವಂತ ಔಷಧಿ ಕಲಬುರಗಿಯಲ್ಲಿ ಲಭ್ಯವಿಲ್ಲದ ಕಾರಣ ಅದೇ ಔಷಧಿ ಸೋಲಾಪುರದಲ್ಲಿ ಬ್ಲಾಕ್ ಮಾರ್ಕೆಟ್‍ನಲ್ಲಿ ಮೂರು ಪಟ್ಟು ಹಣ ತೆತ್ತು ಸೋಂಕಿತರು ಖರೀದಿಸುತ್ತಿರುವ ದಾಖಲೆಯನ್ನು ನಾನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದರಿಂದ ಕೋವಿಡ್ ಹಾಗೂ ಕೋವಿಡೇತರ ಬೆಡ್‍ಗಳ ವಿವರಗಳ ಲಭ್ಯವಿಲ್ಲ. ಸಿಎಂ, ಡಿಸಿಎಂ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಾಲು ಸಾಲು ಸಭೆ ನಡೆಸಿದರೂ ಸೂಕ್ತ ವೈದ್ಯಕೀಯ ಸೌಲಭ್ಯಗಳು ಜಿಲ್ಲೆಯಲ್ಲಿ ಸಿಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಸೋಂಕಿತರು ಜಿಮ್ಸ್, ಇಎಸ್‍ಐ, ಬಸವೇಶ್ವರ ಹಾಗೂ ಧನ್ವಂತರಿ ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸಾಯುವಂತಾಗಿದೆ. ಮೊನ್ನೆ ನಡೆದ ಘಟನೆಯಲ್ಲಿ ಸೋಂಕಿತರೊಬ್ಬರು ಹಾಸಿಗೆ ಸಿಗದೇ ಆಟೋದಲ್ಲಿ ಅಲೆದು ಸಾವನ್ನಪ್ಪಿದ್ದಕ್ಕೆ ಶವವನ್ನು ಡಿಸಿ ಕಚೇರಿಗೆ ತಂದ ಘಟನೆ ನಾಚಿಕೆಗೇಡು. ಒಂದೇ ದಿನದಲ್ಲಿ 8 ಜನರು ಇಎಸ್‍ಐನಲ್ಲಿ ಸಾವನ್ನಪ್ಪಿದ್ದನ್ನು ಮಾನವೀಯತೆ ದೃಷ್ಟಿಯಿಂದ ಪ್ರಶ್ನೆ ಮಾಡಿದ್ದಕ್ಕೆ ತಮ್ಮ ಲೋಪವನ್ನು ಒಪ್ಪಿಕೊಳ್ಳದೆ ರಾಜಕೀಯ ಮಾಡುತ್ತಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಅಲ್ಲಿ ಏನು ತಪ್ಪು ನಡೆಯದೇ ಇದ್ದರೆ ತನಿಖೆಗೆ ಸಮಿತಿ ರಚನೆ ಮಾಡಿದ್ದು ಯಾಕೆ? ಇಎಸ್‍ಐ ಡೀನ್ ವರ್ಗಾವಣೆ ಮಾಡಿದ್ದು ಯಾಕೆ? ಆಕ್ಸಿಜನ್ ಸಿಗದೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಕ್ಕೆ ಆಕೆಯ ಮಗ ವಸ್ತುಸ್ಥಿತಿ ತಿಳಿಸಿ ವಿಡಿಯೋ ಮಾಡಿದ್ದಕ್ಕೆ ಅದನ್ನೂ  ಸರಕಾರ ನಂಬುತ್ತಿಲ್ಲ. ಕೊವೀಡ್ ಸಾವುಗಳನ್ನು ಮುಚ್ಚಿಡುವ ವ್ಯವಸ್ಥೆ ನಡೆಯುತ್ತಿದೆ. ಸೋಂಕಿತರೊಬ್ಬರು ಹೃದಯ ಸಂಬಂಧಿ ಕಾಯಿಲೆ ಇದ್ದು ತೀರಿಕೊಂಡರೆ ಅಂತಹ ಸಾವುಗಳನ್ನು ಕೊವೀಡ್ ಸಾವು ಎಂದು ಹೇಳದೆ ಹೃದಯಾಘಾತದಿಂದಾದ ಸಾವು ಎಂದು ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.

ಉಪಕರಣ ಖರೀದಿ ಅವ್ಯವಹಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ನೋಟಿಸ್ ನೀಡಿದೆ. ಅವರಿಗೆ ಯಾವ ಅಧಿಕಾರ ಇದೆ? ಸರಕಾರದ ಪರವಾಗಿ ಯಾರಾದರೂ ನೀಡಿದ್ದರೆ ಅದು ಸರಿ.  ಆದರೆ, ಇಂತಹ ನೋಟಿಸುಗಳಿಗೆ ಯಾವ ಮೌಲ್ಯವಿದೆ? ಎಂದ ಅವರು, ರಾಜ್ಯದಲ್ಲಿರುವ ಸರಕಾರ ಏನು ಮಾಡುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. 

ತಿರುಪತಿಯಲ್ಲಿ ಕಲ್ಯಾಣ ಮಂಟಪ, ಪ್ರತಿಮೆ ನಿರ್ಮಾಣ ಮಾಡಲು, ಸರಕಾರದ ಸಾಧನೆ ಬಿಂಬಿಸಲು ಕೋಟ್ಯಂತರ ರೂ.ಖರ್ಚು ಮಾಡಲು ಸರಕಾರದ ಬಳಿ ಹಣವಿದೆ. ವಾರಿಯರ್ಸ್‍ಗೆ ಮೂಲಸೌಲಭ್ಯ ಒದಗಿಸುವ ನೆಪದಲ್ಲಿ ಲೂಟಿ ಮಾಡಲು ಹಣವಿದೆ. ಆದರೆ, ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ ಸೌಲಭ್ಯ ಒದಗಿಸಲು ಹಣವಿಲ್ಲ. ನಾವು ಕೋವಿಡ್ ನಿಯಂತ್ರಣದ ವಿಚಾರವಾಗಿ ನಾವು ಸರಕಾರಕ್ಕೆ ಸಹಕಾರ ನೀಡಿದ್ದೇವೆ ಆದರೆ ಭ್ರಷ್ಟಚಾರದ ವಿಷಯದಲ್ಲಿ ಸಹಕಾರ ನೀಡಲು ಸಾಧ್ಯವೇ ಇಲ್ಲ. ಸೋಂಕಿತರಿಗೆ ಬೇಕಾದ ಔಷಧಿ ಸೌಲಭ್ಯ, ಬೆಡ್ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರವನ್ನು ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News