ಸಚಿವ ಶ್ರೀಮಂತ ಪಾಟೀಲ್ ಮರಾಠಿ ಭಾಷಣ : ಕಾನೂನು ಕ್ರಮಕ್ಕೆ ಕನ್ನಡ ಗೆಳೆಯರ ಬಳಗ ಆಗ್ರಹ

Update: 2020-08-02 14:30 GMT

ಬೆಂಗಳೂರು, ಆ.2: ಜವಳಿ ಸಚಿವ ಶ್ರೀಮಂತ ಪಾಟೀಲ್ ಬೆಳಗಾವಿಯ ಅಥಣಿ ಸಮೀಪ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮರಾಠಿಯಲ್ಲಿ ಮಾತನಾಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಇವರ ವಿರುದ್ದ ಕಾನೂನು ಕ್ರಮಜರುಗಿಸಬೇಕೆಂದುಕನ್ನಡ ಗೆಳೆಯರ ಬಳಗ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಅಥಣಿಯಲ್ಲಿ ಶನಿವಾರ ಶ್ರೀಬಸವೇಶ್ವರ ಸಕ್ಕರೆ ಕಾರ್ಖಾನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಜವಳಿ ಸಚಿವ ಶ್ರೀಮಂತ ಪಾಟೀಲ್ ಮರಾಠಿಯಲ್ಲಿ ಭಾಷಣ ಮಾಡುವ ಮೂಲಕ ಅಧಿಕೃತ ಕನ್ನಡ ಭಾಷೆಯನ್ನು ಕಡೆಗಣಿಸಿದ್ದಾರೆ. ಶಿಷ್ಟಾಚಾರವನ್ನು ಉಲ್ಲಂಘಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಚಿವರ ಈ ಅನುಚಿತ ನಡೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಕರ್ನಾಟಕ ಸಚಿವರು, ಅಧಿಕಾರಿಗಳು ಪಾಲ್ಗೊಳ್ಳುವ ಸಮಾರಂಭಗಳ ವೇದಿಕೆಯ ಫಲಕಗಳಲ್ಲಿ ಕನ್ನಡವೇ ಪ್ರಧಾನವಾಗಿರಬೇಕು. ಆದರೆ, ನೆನ್ನೆ ಶ್ರೀಮಂತ ಪಾಟೀಲ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮರಾಠಿ ನಾಮಫಲಕಗಳನ್ನು ಮಾತ್ರ ಅಳವಡಿಸಿದ್ದಾರೆ. ಈ ವಿಚಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸಿ ಕಾರ್ಯಕ್ರಮ ಆಯೋಜಕರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News