ಮಹಿಳಾ ಶಿಕ್ಷಣಕ್ಕೆ ಉತ್ತೇಜಿಸಲು ಸಂಘಟನೆಯ ಶ್ರಮ ಸ್ತುತ್ಯಾರ್ಹ: ಕೆ.ಎಸ್‌. ಈಶ್ವರಪ್ಪ

Update: 2020-08-02 17:14 GMT

ಶಿವಮೊಗ್ಗ: ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾ ವೀರಶೈವ ನೌಕರರ ಸಂಘವು ಹಾಸ್ಟೆಲ್ ನಿರ್ಮಿಸಲು ಹೊರಟಿರುವುದು ಸಮಾಜಮುಖಿ ಚಿಂತನೆಯಾಗಿದೆ ಮಾತ್ರವಲ್ಲ ಅಭಿನಂದನೀಯವಾದುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಹೇಳಿದರು.

ಅವರು ಇಂದು ಕೃಷಿನಗರದಲ್ಲಿ ವೀರಶೈವ ನೌಕರರ ಸಂಘವು ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಹಾಸ್ಟೆಲ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ರಾಜ್ಯದಾದ್ಯಂತ ಜಾತಿಗೊಂದರಂತೆ ಸಂಘಟನೆಗಳಿವೆ. ಅವುಗಳೆಲ್ಲವೂ ಬೋರ್ಡ್ ನಲ್ಲಿ ಮಾತ್ರ ಉಳಿದಿವೆ. ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಸಂಘಗಳು ಕೆಲವು ಮಾತ್ರ. ಎಲ್ಲಾ ಸಮಾಜಗಳ ಅಭಿವೃದ್ಧಿಯಾದಾಗ ಮಾತ್ರ ಹಿಂದೂ ಸಮಾಜದ ವಿಕಾಸವಾಗಲಿದೆ ಎಂದ ಅವರು ಸರ್ಕಾರದ ಪರವಾಗಿ ಮಹಿಳೆಯರಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಒದಗಿಸುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ. ಇಂತಹ ಅತ್ಯಮೂಲ್ಯ ಕಾರ್ಯಕ್ಕೆ ಎಲ್ಲ ವರ್ಗದವರ ಸಹಕಾರ ಅಗತ್ಯವಾಗಿದೆ ಎಂದರು.

ಈಗಾಗಲೇ ದಾನಿಯೊಬ್ಬರು ಸಂಸ್ಥೆಗೆ ನೀಡಿರುವ ಎರಡು ಕೋಟಿ ಮೌಲ್ಯದ ನಿವೇಶನದಲ್ಲಿ ಈಗಾಗಲೆ ಒಂದು ಹಾಸ್ಟೆಲನ್ನು ನಿರ್ಮಿಸಿ ಉಚಿತವಾಗಿ ಸೇವೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.

ಕೃಷಿ ನಗರದಲ್ಲಿ ಬಹುದಿನಗಳಿಂದ ನೆನೆಗುದಿಗೆ ರಸ್ತೆ ನಿರ್ಮಾಣ ಕಾಮಗಾರಿ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಲಾಗುವುದು ಎಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ನೌಕರರ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಈಗಾಗಲೇ ಒಂದು ಹಾಸ್ಟೆಲ್ ಒಂದನ್ನು ನಿರ್ಮಿಸಿ ವಿದ್ಯಾರ್ಥಿಗಳ ಸೇವೆಗೆ ಮುಕ್ತಗೊಳಿಸಲಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವನಿಂದ ಮಹಿಳಾ ಉಚಿತ ಹಾಸ್ಟೆಲ್ ನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಎಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುವರ್ಣ ಶಂಕರ್, ಎನ್.ಜೆ.ರಾಜಶೇಖರ್, ಜ್ಯೋತಿಪ್ರಕಾಶ್ ಸೇರಿದಂತೆ ವೀರಶೈವ ನೌಕರರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News