ಇಂದೋರ್ : ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಜಾಮೀನಿಗೆ ಹೈಕೋರ್ಟ್ ಷರತ್ತು ಏನು ಗೊತ್ತೇ ?

Update: 2020-08-03 04:07 GMT

ಇಂದೋರ್ : ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾದ ಆರೋಪಿಗೆ ಜಾಮೀನು ನೀಡಲು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ವಿಶಿಷ್ಟ ಷರತ್ತು ವಿಧಿಸಿದೆ. ದೂರು ನೀಡಿದ ಮಹಿಳೆಯಿಂದ ರಕ್ಷಾ ಬಂಧನದಂದು ರಾಖಿ ಕಟ್ಟಿಸಿಕೊಂಡು ಮುಂದೆ ಸದಾ ಆಕೆಯನ್ನು ರಕ್ಷಿಸುವ ಭರವಸೆ ನೀಡಬೇಕು ಎಂದು ಷರತ್ತು ವಿಧಿಸಿದೆ.

ಸಹೋದರಿಯ ಆಶೀರ್ವಾದ ಬೇಡುವ ಸಂದರ್ಭದಲ್ಲಿ ಸಹೋದರ ನೀಡಬೇಕಾದ ಉಡುಗೊರೆಯಾಗಿ 11 ಸಾವಿರ ರೂಪಾಯಿಗಳನ್ನು ಮಹಿಳೆಗೆ ನೀಡುವಂತೆಯೂ ಆರೋಪಿ ವಿಕ್ರಮ್ ಬಾಗ್ರಿ ಎಂಬಾತನಿಗೆ ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿ ರೋಹಿತ್ ಆರ್ಯಾ ಈ ಆದೇಶ ಮಾಡಿದ್ದು, ಅರ್ಜಿದಾರ ಆತನ ಪತ್ನಿಯ ಜತೆಗೆ ದೂರು ನೀಡಿದ ಮಹಿಳೆಯ ಮನೆಗೆ ಆ. 3ರಂದು ಬೆಳಗ್ಗೆ 11 ಗಂಟೆಗೆ ರಕ್ಷೆ ಮತ್ತು ಸಿಹಿತಿಂಡಿ ಪೊಟ್ಟಣದೊಂದಿಗೆ ತೆರಳಿ ಮುಂದೆ ಸದಾ ಆಕೆಯ ರಕ್ಷಣೆಗೆ ಶಕ್ತಿ ಮೀರಿ ಶ್ರಮಿಸುವ ಭರವಸೆ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಉಜ್ಜಯಿನಿಯ 30 ವರ್ಷದ ಮಹಿಳೆಯ ಮನೆಗೆ ಎ. 20ರಂದು ನುಗ್ಗಿದ ಬಾಗ್ರಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಮಹಿಳೆಯ ಮಗನಿಗೆ ಬಟ್ಟೆ ಹಾಗೂ ಸಿಹಿ ತಿಂಡಿ ಖರೀದಿಸಲು 5000 ರೂ. ನೀಡುವಂತೆಯೂ ನ್ಯಾಯಪೀಠ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News