ಮೂರು ಭಾಷೆಗಳ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ: ರಾಷ್ಟ್ರೀಯ ಶಿಕ್ಷಣ ನೀತಿಗೆ ತಮಿಳುನಾಡು ಆಕ್ಷೇಪ

Update: 2020-08-03 06:37 GMT

 ಚೆನ್ನೈ, ಆ.3: 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಮೂರು ಭಾಷಾ ಸೂತ್ರವು ನೋವಿನ ಹಾಗೂ ಬೇಸರದ ವಿಚಾರವಾಗಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಹೇಳಿದ್ದಾರೆ.

 ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾ ದೊರೈ, ಎಂಜಿಆರ್ ಹಾಗೂ ಜಯಲಲಿತಾ ಅವರು ಹಿಂದಿ ಭಾಷಾ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವುದನ್ನು ಉಲ್ಲೇಖಿಸಿದ ಪಳನಿಸ್ವಾಮಿ, ಮೂರು ಭಾಷೆಗಳ ನೀತಿಯನ್ನು ಮರು ಪರಿಶೀಲನೆ ನಡೆಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸಿದ್ದಾರೆ.

"ಎನ್‌ಇಪಿಯಲ್ಲಿನ ಮೂರು ಭಾಷೆಯ ಸೂತ್ರವು ನೋವಿನ ಹಾಗೂ ಬೇಸರದ ವಿಚಾರ. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಇದನ್ನು ಮರುಪರಿಗಣಿಸುವಂತೆ ವಿನಂತಿಸುತ್ತೇನೆ'' ಎಂದು ಹೇಳಿಕೆಯೊಂದರಲ್ಲಿ ಪಳನಿಸ್ವಾಮಿ ಹೇಳಿದ್ದಾರೆ.

  1965ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಹೇರುವಪ್ರಯತ್ನ ಮಾಡಿದಾಗ ತಮಿಳುನಾಡಿನ ವಿದ್ಯಾರ್ಥಿಗಳು ನಡೆಸಿದ ಹಿಂದಿ ವಿರೋಧಿ ಪ್ರತಿಭಟನೆಯನ್ನು ಪಳನಿಸ್ವಾಮಿ ನೆನಪಸಿದರು.

ಮೂರು ಭಾಷೆಗಳ ನೀತಿಯಲ್ಲಿ ಯಾವ ಭಾಷೆ ಆಯ್ಕೆ ಮಾಡಬೇಕೆನ್ನುವುದನ್ನು ರಾಜ್ಯಗಳೇ ನಿರ್ಧರಿಸಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ, ತಮಿಳುನಾಡಿನ ಪ್ರಕಾರ ಇದು ಕೇಂದ್ರ ಸರಕಾರದಿಂದ ಹಿಂದಿಯನ್ನು ಹೇರುವ ಪ್ರಯತ್ನ ವಾಗಿದೆ.

ಕೇಂದ್ರ ಸರಕಾರ ಯಾವುದೆ ಭಾಷೆಯನ್ನು ಯಾವುದೇ ರಾಜ್ಯಕ್ಕೆ ಹೇರುವುದಿಲ್ಲ ಎಂದು ತಮಿಳುನಾಡಿನ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್‌ಗೆ ಟ್ವೀಟ್ ಮೂಲಕ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ‌ನೇತೃತ್ವದ ಡಿಎಂಕೆ ಸಹಿತ ಹಲವು ವಿಪಕ್ಷಗಳು ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿವೆ. ಎನ್‌ಇಪಿ ಪಾಲಿಸಿ ಪ್ರಸ್ತಾವಿಸಿರುವ ವ್ಯಾಪಕ ಸುಧಾರಣೆಗಳ ವಿಮರ್ಶೆಯನ್ನು ಬಯಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News