ಮೆಕ್ಸಿಕೊ ಕೊಲ್ಲಿಯ ನೀರಿನಲ್ಲಿ ಇಳಿದ ಬಾಹ್ಯಾಕಾಶ ನೌಕೆ

Update: 2020-08-03 17:44 GMT

ವಾಶಿಂಗ್ಟನ್, ಆ. 3: ಸುಮಾರು ಒಂದು ದಶಕದ ಅವಧಿಯಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿರುವ ಅಮೆರಿಕದ ಮೊದಲ ಸಿಬ್ಬಂದಿಸಹಿತ ಬಾಹ್ಯಾಕಾಶ ನೌಕೆ ‘ಕ್ರೂ ಡ್ರ್ಯಾಗನ್ ಎಂಡವರ್’ ರವಿವಾರ ಸುರಕ್ಷಿತವಾಗಿ ಭೂಮಿಗೆ ಮರಳಿದೆ. ನೌಕೆಯು ಮೆಕ್ಸಿಕೊ ಕೊಲ್ಲಿಯಲ್ಲಿ ನೀರಿನ ಮೇಲೆ ಇಳಿದಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತು ಖಾಸಗಿ ಬಾಹ್ಯಾಕಾಶ ಕಂಪೆನಿ ‘ಸ್ಪೇಸ್‌ಎಕ್ಸ್’ ಜಂಟಿಯಾಗಿ ಕೈಗೊಂಡಿರುವ ಈ ಬಾಹ್ಯಾಕಾಶ ಕಾರ್ಯಕ್ರಮವು, ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಮತ್ತು ಅಲ್ಲಿಂದ ಹಿಂದಕ್ಕೆ ತರುವ ಸಾಮರ್ಥ್ಯ ಅಮೆರಿಕಕ್ಕೆ ಮತ್ತೊಮ್ಮೆ ಬಂದಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಅಮೆರಿಕದ ಬಾಹ್ಯಾಕಾಶ ನೌಕೆ ‘ಸ್ಪೇಸ್ ಶಟಲ್’ಗೆ 2011ರಲ್ಲಿ ನಾಸಾವು ನಿವೃತ್ತಿ ಘೋಷಿಸಿದ ಬಳಿಕ, ಅಮೆರಿಕದ ನೆಲದಿಂದ ಗಗನಯಾನಿಗಳನ್ನು ಹೊತ್ತು ಯಶಸ್ವಿಯಾಗಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಮತ್ತು ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ಕರೆತಂದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ.

ಅದೂ ಅಲ್ಲದೆ, 1975ರ ಅಮೆರಿಕ-ರಶ್ಯ ಸಹಭಾಗಿತ್ವದ ಅಪೋಲೊ-ಸೋಯಝ್ ಬಾಹ್ಯಾಕಾಶ ಯೋಜನೆಯ ಬಳಿಕ, ಅಮೆರಿಕದ ಸಿಬ್ಬಂದಿಸಹಿತ ಬಾಹ್ಯಾಕಾಶ ನೌಕೆಯೊಂದು ನೀರಿನ ಮೇಲೆ ಭೂಸ್ಪರ್ಶ ಮಾಡಿರುವುದು ಇದೇ ಮೊದಲು.

ಗಗನಯಾತ್ರಿಗಳಾದ ಡೌಗ್ ಹರ್ಲೇ ಮತ್ತು ಬಾಬ್ ಬೆಹಂಕನ್‌ರನ್ನು ಹೊತ್ತ ‘ಕ್ರೂ ಡ್ರ್ಯಾಗನ್ ಎಂಡವರ್’ ನೌಕೆಯು ಜಲಸ್ಪರ್ಶ ಮಾಡುತ್ತಲೇ, ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ರಕ್ಷಣಾ ಹಡಗುಗಳು ಅದರತ್ತ ಧಾವಿಸಿದವು. ಒಂದು ಹಡಗು ತನ್ನ ಕ್ರೇನ್ ಮೂಲಕ ತೇಲುತ್ತಿದ್ದ ಬಾಹ್ಯಾಕಾಶ ನೌಕೆಯನ್ನು ಮೇಲೆತ್ತಿ ತನ್ನ ಒಡಲಿಗೆ ತುಂಬಿಸಿಕೊಂಡಿತು.

ಜಲಸ್ಪರ್ಶದ ಸುಮಾರು ಒಂದು ಗಂಟೆ ಬಳಿಕ, ಗಗನಯಾನಿಗಳು ಬಾಹ್ಯಾಕಾಶ ನೌಕೆಯಿಂದ ಹೊರಬಂದು ಹೆಲಿಕಾಪ್ಟರ್ ಮೂಲಕ ತೀರ ತಲುಪಿದರು. ಬಳಿಕ ಅವರು ವಿಮಾನದ ಮೂಲಕ ಹ್ಯೂಸ್ಟನ್‌ಗೆ ತೆರಳಿದ್ದಾರೆ.

ಮುಂದೆ ಭೂಮಿಯ ಕೆಳ ಕಕ್ಷೆ, ಚಂದ್ರ, ಕೊನೆಗೆ ಮಂಗಳನಲ್ಲಿಗೆ ಮಾನವರ ಸಾಗಾಟ

‘‘ನಾವು ಮಾನವ ಬಾಹ್ಯಾಕಾಶ ಯಾನದ ನೂತನ ಶಕೆಯೊಂದನ್ನು ಪ್ರವೇಶಿಸಿದ್ದೇವೆ. ಇಲ್ಲಿ ಇನ್ನು ಮುಂದೆ ಎಲ್ಲ ಯಂತ್ರೋಪಕರಣಗಳ ಖರೀದಿದಾರ, ಮಾಲೀಕ ಮತ್ತು ನಿರ್ವಾಹಕ ನಾಸಾ ಆಗಿರುವುದಿಲ್ಲ’’ ಎಂದು ನಾಸಾ ಮುಖ್ಯಾಧಿಕಾರಿ ಜಿಮ್ ಬ್ರೈಡನ್‌ಸ್ಟೈನ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಇದು ಆರಂಭ ಮಾತ್ರ. ಭೂಮಿಯ ಕೆಳ ಕಕ್ಷೆಗೆ ಜನರನ್ನು ನಿಯಮಿತವಾಗಿ ಕರೆದುಕೊಂಡು ಹೋಗುವ ಕಾರ್ಯಕ್ರಮವನ್ನು ನಾವು ಆರಂಭಿಸಲಿದ್ದೇವೆ. ಅಲ್ಲಿಂದ ಚಂದ್ರನಲ್ಲಿಗೆ ಹಾಗೂ ಅಂತಿಮವಾಗಿ ಮಂಗಳ ಗ್ರಹಕ್ಕೆ ಜನರನ್ನು ನಿಯಮಿತವಾಗಿ ಕರೆದುಕೊಂಡು ಹೋಗುವುದು ನಮ್ಮ ಗುರಿಯಾಗಿದೆ’’ ಎಂದು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಪೇಸ್‌ಎಕ್ಸ್ ಕಂಪೆನಿಯ ಅಧ್ಯಕ್ಷ ಗ್ವಾಯನ್ ಶಾಟ್‌ವೆಲ್ ಹೇಳಿದರು.

ಬಾಹ್ಯಾಕಾಶದಲ್ಲಿ ದೈತ್ಯ ಹೆಜ್ಜೆಗಳನ್ನು ಇಟ್ಟ ‘ಸ್ಪೇಸ್‌ಎಕ್ಸ್’

2011ರಲ್ಲಿ ಅಮೆರಿಕದ ಬಾಹ್ಯಾಕಾಶ ನೌಕೆ ‘ಸ್ಪೇಸ್ ಶಟಲ್’ ಬಾಹ್ಯಾಕಾಶಕ್ಕೆ ಕೊನೆಯ ಹಾರಾಟ ನಡೆಸಿದ ಬಳಿಕ, ಅಮೆರಿಕವು ಬಾಹ್ಯಾಕಾಶ ಪ್ರಯಾಣಕ್ಕೆ ರಶ್ಯವನ್ನೇ ಅಲವಂಬಿಸಬೇಕಾಗಿತ್ತು.

‘ಕ್ರೂ ಡ್ರ್ಯಾಗನ್ ಎಂಡವರ್’ ಬಾಹ್ಯಾಕಾಶ ಕಾರ್ಯಕ್ರಮವು ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್‌ಎಕ್ಸ್’ಗೆ ಲಭಿಸಿದ ಅತಿ ದೊಡ್ಡ ಯಶಸ್ಸಾಗಿದೆ. 2002ರಲ್ಲಿ ಎಲಾನ್ ಮಸ್ಕ್ ಸ್ಥಾಪಿಸಿದ ಈ ಕಂಪೆನಿಯು ಹಂತ ಹಂತವಾಗಿ ಅಗಾಧ ಬೆಳವಣಿಗೆಯನ್ನು ಸಾಧಿಸುತ್ತಾ ಬಂದಿದೆ. ಮುಖ್ಯವಾಗಿ ಅದು ವಾಣಿಜ್ಯ ಬಾಹ್ಯಾಕಾಶ ಸ್ಪರ್ಧೆಯಲ್ಲಿ ತನ್ನ ಪ್ರಧಾನ ಸ್ಪರ್ಧಿಯಾಗಿರುವ ಬೋಯಿಂಗ್ ಕಂಪೆನಿಯನ್ನು ಹಿಂದೆ ಹಾಕಿದೆ.

‘ಬಾಹ್ಯಾಕಾಶ ಟ್ಯಾಕ್ಸಿ’ಗಳನ್ನು ನಿರ್ಮಿಸಲು ಅಮೆರಿಕವು ಬೋಯಿಂಗ್ ಮತ್ತು ಸ್ಪೇಸ್‌ಎಕ್ಸ್ ಕಂಪೆನಿಗಳಿಗೆ ಒಟ್ಟು ಸುಮಾರು 7 ಬಿಲಿಯ ಡಾಲರ್ (ಸುಮಾರು 52,650 ಕೋಟಿ ರೂಪಾಯಿ)ಗಳ ಗುತ್ತಿಗೆಗಳನ್ನು ನೀಡಿತ್ತು. ಆದರೆ, ವಿಮಾನ ಕ್ಷೇತ್ರದ ದೈತ್ಯ ಬೋಯಿಂಗ್‌ನ ಪ್ರಯತ್ನಗಳು ತೀವ್ರ ಹಿನ್ನಡೆಗೊಳಗಾಗಿವೆ.

ಅಗಾಧ ವೇಗದೊಂದಿಗೆ ಭೂಮಿಯ ವಾತಾವರಣ ಪ್ರವೇಶಿಸಿದ ‘ಎಂಡವರ್’

ಬಾಹ್ಯಾಕಾಶ ನೌಕೆಯು ಗಂಟೆಗೆ ಸುಮಾರು 28,000 ಕಿ.ಮೀ. ವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಅದರ ಉಷ್ಣತೆಯು 1900 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇದರಿಂದಾಗಿ ಸ್ವಲ್ಪ ಸಮಯ ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿತು. ಆದರೆ, ಅದು ನಿರೀಕ್ಷಿತವಾಗಿತ್ತು.

ಭೂಮಿಯ ವಾತಾವರಣದಲ್ಲಿ ಚಲಿಸುವಾಗ ನೌಕೆಯ 4 ಪ್ಯಾರಾಶೂಟ್‌ಗಳನ್ನು ನಿಯೋಜಿಸಲಾಯಿತು. ಅಂತಿಮವಾಗಿ ಅದು ಮೆಕ್ಸಿಕೊ ಕೊಲ್ಲಿಯ ಮೇಲೆ ಇಳಿಯುವಾಗ ಅದರ ವೇಗವು ಗಂಟೆಗೆ 24 ಕಿ.ಮೀ.ಗೆ ಇಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News