ಕೊರೋನ ಹೆಸರಿನಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ರೂ. ಭ್ರಷ್ಟಚಾರ: ಡಿ.ಕೆ. ಸುರೇಶ್ ಆರೋಪ

Update: 2020-08-03 19:21 GMT

ಹಾಸನ: ಕೊರೋನ ಹೆಸರಿನಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸುವ ಅಗತ್ಯತೆ ಇದೆ. ಸರಕಾರಕ್ಕೆ ಆಯಸ್ಸು ಕಡಿಮೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ. ಸುರೇಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 130 ದಿನಗಳಿಂದ ರಾಷ್ಟ್ರದಲ್ಲಿ ಕೊರೋನ ವೈರಸ್ ವಿಚಾರವಾಗಿ ಅನಾಹುತಗಳು ಸಂಭವಿಸಿದೆ. ದೇಶದ ಮತ್ತು ರಾಜ್ಯದ ಆರೋಗ್ಯದ ದೃಷ್ಠಿಯಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಿ ಕಾಂಗ್ರೆಸ್ ಮತ್ತು ಎಲ್ಲಾ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ದೇಶ ಒಂದು ಎಂದು ಸಾಬೀತುಪಡಿಸಿದೆ. ಆದರೇ ಕೊರೋನ ಹೆಸರಿನಲ್ಲಿ ಜನ ಸಾಯುತ್ತಿದ್ದಾರೆ. 18 ಲಕ್ಷ ಜನ ದೇಶದಲ್ಲಿ ಕೊರೋನ ಪಾಸಿಟಿವ್ ಹೊಂದಿದ್ದಾರೆ. 1500 ಜನರು ಮೃತಪಟ್ಟಿದ್ದಾರೆ. ಸರಕಾರದ ವಿವಿಧ ಇಲಾಖೆಗಳು ಮಾಡಿರುವ ನಾಲ್ಕು ಸಾವಿರ ಕೋಟಿ ರೂಗಳಿಗೂ ಹೆಚ್ಚಿನ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಮಂತ್ರಿಗಳು ಮತ್ತು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ ಎಂದು ದೂರಿದರು.

ಲಾಕ್ ಡೌನ್ ಘೋಷಣೆ ಮಾಡಿದ 120 ದಿನಗಳ ನಂತರ ಬೆಂಗಳೂರಿನಲ್ಲಿ ವಸ್ತು ಪ್ರದರ್ಶನದ ಮೈದಾನದಲ್ಲಿ ಕೊರೋನ ಸೆಂಟರ್ ಮಾಡಲು ಹೊರಟಿದ್ದಾರೆ. ಕೊರೋನ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ಕೊರೋನ ವೇಳೆ ಯಾವ ಸಿದ್ಧತೆ ಮಾಡಿಕೊಳ್ಳದೇ 90 ದಿನಗಳ ನಂತರ ಸಿದ್ಧತೆಗೆ ಮುಂದಾಗಿರುವವರು ಇಲ್ಲಿವರೆಗೂ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈ ಸಂಕಷ್ಟದಲ್ಲಿ ಜನರು ಬದುಕುವುದೇ ಕಷ್ಟವಾಗಿದೆ. ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರಗಳು ನಡೆದಿದೆ. ಹೆಣದ ಮೇಲೆ ಹಣ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.

ಇನ್ನು ಮಾಸ್ಕ್ ದರ ಮಾರುಕಟ್ಟೆಯ ದರಗಳಿಗಿಂತ 126 ರೂ. ಗಳಿಂದ 150 ರೂಗಳವರೆಗೂ ಖರೀದಿ ಮಾಡಲಾಗಿದೆ. ಕಳಪೆ ಗುಣಮಟ್ಟದ ಮಾಸ್ಕ್ ಗಳನ್ನು ಖರೀದಿ ಮಾಡಿದ್ದು, ಕಂದಾಯ ಇಲಾಖೆಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ವೆಂಟಿಲೇಟರ್ ನ್ನು ಸರಕಾರವು ಕನಿಷ್ಟ 5.6 ಲಕ್ಷ ರೂಗಳಿಂದ 18, 20 ಲಕ್ಷ ರೂಗಳವರೆಗೂ ಹಣ ನೀಡಿ ಖರೀದಿ ಮಾಡಿದರು. ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ 80 ರಿಂದ 100 ರೂಗಳು ಇರುವುದನ್ನು 250 ರೂಗಳು ನೀಡಿ ಖರೀದಿ ಮಾಡಿದೆ. ಭ್ರಷ್ಟಚಾರ ನಡೆದಿರುವ ಬಗ್ಗೆ ನಮಗೆ ಲೆಕ್ಕ ಕೊಡುವುದು ಬೇಡ, ರಾಜ್ಯದ 6 ಕೋಟಿ ರೂ. ಜನರಿಗೆ ತಿಳಿಸಲಿ ಎಂದರು.

ಇಂದು ಬಿಜೆಪಿ ಸರಕಾರದ ಆಡಳಿತ ಯಂತ್ರ ಕುಸಿದಿದ್ದು, ಇವರಲ್ಲಿ ಯಾವ ಹೊಂದಾಣಿಕೆ ಇರುವುದಿಲ್ಲ. ಹಸಿರು ಟವಲ್ ಹಾಕಿಕೊಂಡು ಅಧಿಕಾರಕ್ಕೆ ಬಂದ ಸರಕಾರವು ರೈತರ ಸಮಸ್ಯೆ ಬಗ್ಗೆ ಒಂದು ಮಾತನಾಡದೇ ಕೊರೋನ ಹೆಸರನ್ನು ಹೇಳುವ ಮೂಲಕ ಜಾರಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು. ಕೊರೋನದಿಂದ ಜನರು ಸಾಯುತ್ತಿದ್ದರೆ ರಾಜ್ಯ ಸರಕಾರವು ಬೋರ್ಡ್ ಚೇರ್ಮನ್ ಇತರೆ ಸ್ಥಾನಗಳಿಗೆ ಅಧಿಕಾರ ನೀಡಲು ಹೊರಟಿರುವುದಾಗಿ ವ್ಯಂಗ್ಯವಾಡಿದರು. ಎಲ್ಲಾ ಆರೋಪಗಳನ್ನು ಮತ್ತು ಮಂತ್ರಿಗಳು ನೀಡಿರುವ ಸತ್ಯತೆಗಳನ್ನು ಪರಾಮರ್ಶಿಸಲು ರಾಜ್ಯ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ಆಯೋಗ ರಚಿಸಬೇಕೆಂದು ಅವರು ಒತ್ತಾಯಿಸಿದರು. 

ನಮಗೆ ರಾಜ್ಯದ ಜನತೆಯ ಹಿತಾ ಪ್ರಮುಖವಾಗಿದ್ದು, ನಿಮ್ಮ ಗೊಡ್ಡು ನೋಟಿಸ್ ಗೆ ಯಾರು ಹೆದರುವುದಿಲ್ಲ. ಈ ಬಿಜೆಪಿ ಸರಕಾರಕ್ಕೆ ಆಯಸ್ಸು ಕಡಿಮೆ ಇದ್ದು, ಜುಡೀಸಿಯಲ್ ತನಿಖೆ ಮಾಡಿ ಶುದ್ಧ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ನಂಬಿಕೆ ದ್ರೋಹಿ ಎಂದರೆ ಯೋಗೇಶ್ವರ್. ಮುಖ್ಯಮಂತ್ರಿಯಾದ ಯಡಿಯೂರಪ್ಪನವರನ್ನೇ ಅಧಿಕಾರದಿಂದ ತೆಗೆಯಲು ಗುಂಪು ಕಟ್ಟಲಾಗಿತ್ತು. ಬಣ್ಣ ಹಾಕುವ ಜನ ಎಂದು ಎಂ.ಎಲ್.ಸಿ. ಮಾಡಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಪಕ್ಷ ಎದ್ದೇಳುತ್ತದೆ. ಎರಡು ಮೂರನೇ ನಾಯಕರ ಜೊತೆ ಗೂಡಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಳ್ಳುವ ಕೆಲಸವನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ. ಶಿವರಾಂ, ಹೆಚ್.ಕೆ. ಜವರೇಗೌಡ, ಎಸ್.ಎಂ. ಆನಂದ್, ಹೆಚ್.ಕೆ. ಮಹೇಶ್, ಹೆಚ್.ಪಿ. ಮೋಹನ್, ಸಿ.ಎಸ್. ಪುಟ್ಟೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಪಕ್ಷದ ಮುಖಂಡರಾದ ದೇವರಾಜೇಗೌಡ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News