ಕೊರೋನ ಗೆದ್ದ ಕಲ್ಮನೆ ಕಾಮೇಗೌಡರಿಗೆ ಆತ್ಮೀಯ ಬೀಳ್ಕೊಡುಗೆ

Update: 2020-08-03 19:23 GMT

ಮಂಡ್ಯ, ಆ.3: ಕೊರೊನ ಸೋಂಕಿನಿಂದ ಗುಣಮುಖರಾದ ಕೆರೆಗಳ ನಿರ್ಮಾತೃ ಕಲ್ಮನೆ ಕಾಮೇಗೌಡ(85) ಅವರನ್ನು ಮಿಮ್ಸ್ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು.

ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕಾಮೇಗೌಡರನ್ನು ಜಿಲ್ಲಾಡಳಿತ ಮತ್ತು ಹಲವು ಸಂಘಟನೆಗಳಿಂದ ಬ್ಯಾಂಡ್ ಸೆಟ್ ವಾದ್ಯದೊಂದಿಗೆ ಹೂಮಳೆಗೈದು ಮಳವಳ್ಳಿಯ ದಾಸನದೊಡ್ಡಿಯ ಅವರ ಮನೆಗೆ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಕಾಮೇಗೌಡರು ಆತ್ಮಸ್ಥೈರ್ಯದಿಂದ ಕೊರೋನ ಗೆದ್ದುಬಂದಿದ್ದು, ಇತರೆ ರೋಗಿಗಳಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ದಾಸನದೊಡ್ಡಿ ಗ್ರಾಮದ ಬೆಟ್ಟದಲ್ಲಿ ಹತ್ತಾರು ಕೆರೆಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ನೀರುಣಿಸುತ್ತಿರುವ ಕಾಮೇಗೌಡರು ಸೋಂಕಿಗೆ ಒಳಗಾದಾಗ ಆತಂಕವಾಗಿತ್ತು. ಆದರೆ, ಅವರ ಆತ್ಮಸ್ಥೈರ್ಯ ಮೆಚ್ಚುವಂಥದ್ದು ಎಂದು ಅವರು ಹೇಳಿದರು.

ನಾನು ಕೊರೋನ ಸೋಂಕಿಗೆ ಒಳಗಾದಾಗ ತೀವ್ರ ಆತಂಕವಾಗಿತ್ತು. ಜಿಲ್ಲಾಡಳಿತ ಮತ್ತು ಹಲವು ಸಂಘಟನೆಗಳ ಮುಖಂಡರು, ಅಭಿಮಾನಿಗಳ ಅಕ್ಕರೆಯ ಪ್ರೀತಿಯಿಂದ ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಕಾಮೇಗೌಡ ಕೃತಜ್ಞತೆ ಸಲ್ಲಿಸಿದರು. ನಾನು ಸ್ವಾರ್ಥಕ್ಕಾಗಿ ಕೆರೆಗಳ ನಿರ್ಮಿಸಲಿಲ್ಲ. ಪ್ರಾಣಿ, ಪಕ್ಷಿಗಳಿಗಾಗಿ ಶ್ರಮಿಸಿದ್ದೇನೆ. ಕೆರೆಗಳು ಕಣ್ಣುದುರೇ ಸಾಕ್ಷಿಯಾಗಿದ್ದರೂ ಕೆಲವು ಮಾಧ್ಯಮಗಳು ಮತ್ತು ಹಲವರು ಆರೋಪ ಮಾಡಿದರು ಎಂದು ಅವರು ವಿಷಾದಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಮಿಮ್ಸ್ ಅಧೀಕ್ಷಕ ಡಾ.ಹರೀಶ್, ಡಾ.ಶಿವಕುಮಾರ್, ಪ್ರಗತಿಪರ ಹೋರಾಟಗಾರರಾದ ಎಂ.ಬಿ.ನಾಗಣ್ಣಗೌಡ, ಅಭಿ ಹನಕೆರೆ, ಬಿ.ಕೆ.ಸತೀಶ್, ಇತರರು ಉಪಸ್ಥಿತರಿದ್ದರು.

ಮಳವಳ್ಳಿಯ ದಾಸನದೊಡ್ಡಿ ಗ್ರಾಮದ ಕುಂದನಬೆಟ್ಟದಲ್ಲಿ ಕುರಿಗಾಹಿ ಕಾಮೇಗೌಡರು ಹತ್ತಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ ಅವರಿಂದ ಶ್ಲಾಘಿಸಲ್ಪಟ್ಟಿದ್ದಾರೆ. ಮುರುಘಮಠ ಬಸವಶ್ರೀ, ರಾಜ್ಯ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News