ಪ್ರಭಾವಿ ನಾಯಕರಾಗಿದ್ದ ಬಿಎಸ್‌ವೈ ಈಗ ರಾಜಿ ರಾಜಕಾರಣಕ್ಕೆ ಒತ್ತು ಕೊಡುತ್ತಿದ್ದಾರೆ: ಆರ್.ವಿ.ದೇಶಪಾಂಡೆ

Update: 2020-08-04 12:46 GMT

ಹುಬ್ಬಳ್ಳಿ, ಆ.4 : ಶಾಸಕರು ಹಾಗೂ ಸಚಿವರ ಮಾತಿಗೆ ಮಣಿಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಡಳಿತ ಹಳಿ ತಪ್ಪಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ದೂರಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಶಾಸಕರಾಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಅವರ ಕಾರ್ಯವೈಖರಿ ನೋಡಿದ್ದೇನೆ. ಆಗ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಮುಖ್ಯಮಂತ್ರಿಯಾದ ಬಳಿಕ ರಾಜಿ ರಾಜಕಾರಣಕ್ಕೆ ಒತ್ತು ಕೊಡುತ್ತಿದ್ದಾರೆ ಎಂದರು.

ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಮುಂಬೈನ ಧಾರಾವಿಯಲ್ಲಿ ಈಗ ಸೋಂಕಿತರ ಸಂಖ್ಯೆ 72ಕ್ಕೆ ಇಳಿದಿದೆ. ಇದಕ್ಕೆ ಕಾರಣರಾದ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ರಾಜ್ಯಕ್ಕೆ ಮಾದರಿಯಾಗಬೇಕಿತ್ತು. ಆದರೆ, ಪದೇ ಪದೇ ಅಧಿಕಾರಿಗಳ ವರ್ಗಾವಣೆ, ಕೋವಿಡ್ ಉಸ್ತುವಾರಿಗಳನ್ನೂ ಮೇಲಿಂದ ಮೇಲೆ ಬದಲಿಸಿದ ರಾಜ್ಯ ಸರಕಾರ ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಆರಂಭದ ಲಾಕ್‍ಡೌನ್ ಅವಧಿಯಲ್ಲಿ ರಾಜ್ಯ ಸರಕಾರ ಕೊರೋನ ಸಮಯವನ್ನು ಎದುರಿಸಲು ಸರಿಯಾಗಿ ಸಿದ್ಧತೆಗಳನ್ನೇ ಮಾಡಿಕೊಂಡಿರಲಿಲ್ಲ. ವಲಸೆ ಕಾರ್ಮಿಕರ ನಿರ್ವಹಣೆ, ಕೊರೋನ ವಾರಿಯರ್ ಗಳ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಂಡಿಲ್ಲ. ಶಾಸಕರ ಮೂಲಕ ಲಕ್ಷಾಂತರ ಆಹಾರದ ಕಿಟ್‍ಗಳನ್ನು ನೀಡಲಾಗಿದೆ ಎಂದು ಸರಕಾರ ಹೇಳಿದೆ. ಆ ಕಿಟ್‍ಗಳನ್ನು ಹೇಗೆ, ಯಾವಾಗ ಮತ್ತು ಯಾರಿಗೆ ನೀಡಲಾಗಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಸೋಂಕಿತರ ಪ್ರಮಾಣ ಅಧಿಕವಾಗಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಕಡಿಮೆಯಿತ್ತು. ಆದರೆ, ಈಗ ಅಲ್ಲಿ ಇಳಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಅಧಿಕವಾಗುತ್ತಿವೆ. 14 ದಿನಗಳಿಂದ 7 ದಿನಗಳಿಗೆ ಕ್ವಾರಂಟೈನ್ ದಿನಗಳನ್ನು ಕಡಿಮೆ ಮಾಡಿದ್ದು, ಮಾಸ್ಕ್ ಧರಿಸದ ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಇರುವುದು, ವೇಗವಾಗಿ ಪರೀಕ್ಷೆ ಮಾಡದಿರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಟೀಕಿಸಿದರು.

ಪ್ರಶ್ನಿಸುವುದೇ ತಪ್ಪಾ?: ಕೋವಿಡ್ ಪರಿಕರಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ನಮ್ಮ ಪಕ್ಷದ ಮುಖಂಡರು ಹೇಳಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರಾಗಿ ನಾವು ಸರಕಾರದ ಕ್ರಮವನ್ನು ಪ್ರಶ್ನಿಸುವುದೇ ತಪ್ಪಾ ಎಂದು ದೇಶಪಾಂಡೆ ಕೇಳಿದರು.

ನಾವು ಈ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ. ರಾಜ್ಯ ಸರಕಾರದ ತಪ್ಪಿಲ್ಲದಿದ್ದರೆ ಇದಕ್ಕೆ ಒಪ್ಪಲಿ. ಆಗ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗುತ್ತದೆ. ತನಿಖೆಗೆ ಹಿಂದೇಟು ಏಕೆ? ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News