ರಾಮಮಂದಿರದ ಶಿಲಾನ್ಯಾಸಕ್ಕೆ ಆಹ್ವಾನಿಸಬೇಕೆಂಬ ಕಾಂಗ್ರೆಸ್ ಬೇಡಿಕೆ ಹಾಸ್ಯಾಸ್ಪದ: ಸದಾನಂದ ಗೌಡ

Update: 2020-08-04 15:48 GMT

ಬೆಂಗಳೂರು, ಆ. 4: ರಾಮಮಂದಿರ ನಿರ್ಮಾಣದ ವಿರೋಧಿಗಳಾಗಿರುವ ಕಾಂಗ್ರೆಸಿಗರು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕೆಂಬ ಅವರ ಬೇಡಿಕೆ ಹಾಸ್ಯಾಸ್ಪದವಾಗಿದೆ. ಮೊದಲನೆಯಯದಾಗಿ ಇದು ಸರಕಾರಿ ಕಾರ್ಯಕ್ರಮವಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್ ಸಂಘಟಿಸುತ್ತಿರುವ ಕಾರ್ಯಕ್ರಮವಿದು. ಯಾರನ್ನು ಆಮಂತ್ರಿಸಬೇಕು, ಯಾರನ್ನು ಆಮಂತ್ರಿಸಬಾರದು ಎಂಬುದು ಸಂಘಟಕರಿಗೆ ಬಿಟ್ಟ ವಿಚಾರ. ಅಷ್ಟಕ್ಕೂ ಕಾಂಗ್ರೆಸ್ಸಿಗೂ ರಾಮಮಂದಿರ ನಿರ್ಮಾಣಕ್ಕೂ ಎತ್ತಣದಿಂದೆತ್ತಣ ಸಂಬಂಧ? ಮೊದಲಿನಿಂದಲೂ ಅಯೋಧ್ಯೆ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದವರು ಕಾಂಗ್ರೆಸ್ಸಿಗರು. ಕರಸೇವಕರ ಮೇಲೆ ಗುಂಡುಹಾರಿಸಿದವರು. ಅಕ್ರಮ ಬಾಬರಿ ಕಟ್ಟಡ ನೆಲಸಮವಾದಾಗ ಉತ್ತರ ಪ್ರದೇಶದಲ್ಲಿನ ಬಿಜೆಪಿ ಸರಕಾರವನ್ನ ವಜಾ ಮಾಡಿದವರು ಕಾಂಗ್ರೆಸ್ಸಿಗರು.

ಮತ್ತೆ, ವಿವಾದಾತ್ಮಕ ಬಾಬರಿ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಯೋಚಿಸಿದವರು ಕಾಂಗ್ರೆಸ್ಸಿಗರು. ರಾಮಜನ್ಮಭೂಮಿ ವಿವಾದವನ್ನು ಶೀಘ್ರ ಇತ್ಯರ್ಥಗೊಳಿಸಲು ಕೋಟ್ಯಂತರ ಶ್ರದ್ಧಾಳುಗಳು ಹಂಬಲಿಸುತ್ತಿದ್ದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ಹಾಜರಾಗುವ ಇದೇ ಕಾಂಗ್ರೆಸ್ಸಿನ ಘಟಾನುಘಟಿ ವಕೀಲರು ಚುನಾವಣೆ ನಂತರ ಪ್ರಕರಣದ ವಿಚಾರಣೆ ಮಾಡುವಂತೆ ಕೋರ್ಟಿನಲ್ಲಿ ವಾದಿಸುತ್ತಾರೆ. ಭಾರತ-ಶ್ರೀಲಂಕಾ ನಡುವೆ ಇರುವ ಪಾರಂಪರಿಕ ರಾಮಸೇತು ಅವಶೇಷಗಳನ್ನು ಸೇತುಸಮುದ್ರಮ್ ಯೋಜನೆ ಹೆಸರಲ್ಲಿ ನಾಶಮಾಡಲು ಮುಂದಾವರು ಕಾಂಗ್ರೆಸ್ಸಿಗರು.

ಹಾಗೆಯೇ ಶ್ರೀರಾಮ ಇದ್ದ ಅನ್ನುವುದಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ ಎಂದು ಸುಪ್ರೀಂ ಕೋರ್ಟ್‍ನಲ್ಲಿ 2007ರಲ್ಲಿ ಅಫಿಡವಿಟ್ ಸಲ್ಲಿಸಿದವರು ಕಾಂಗ್ರೆಸ್ಸಿಗರು. ಮೊನ್ನೆಯಷ್ಟೆ ಶಿಲಾನ್ಯಾಸವನ್ನು ಮುಂದೂಡುವಂತೆ ತಮ್ಮ ಚೇಲಾಗಳ ಮೂಲಕ ಪಿಐಎಲ್ ದಾಖಲಿಸಲು ಹೋಗಿ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇಂಥ ಕಾಂಗ್ರೆಸ್ಸಿಗರು ಇಂದು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ಬಯಸುತ್ತಿದ್ದಾರೆ. ಅತ್ತೂ ಕರೆದು ಈ ಐತಿಹಾಸಿಕ ಕ್ಷಣದ ಭಾಗವಾಗಲು ಪ್ರಯತ್ನಿಸುತ್ತಿದ್ದಾರೆ. ಅವರನ್ನ ಹತಾಶೆ ಎಷ್ಟರಮಟ್ಟಿಗೆ ಆವರಿಸಿದೆ ಎಂಬುದರ ದ್ಯೋತಕವಿದು. ಭಗವಾನ್ ರಾಮಚಂದ್ರ ಅವರಿಗೆ ಇನ್ನಾದರೂ ಸದ್ಬುದ್ಧಿ ಕರುಣಿಸಲಿ ಎಂದಷ್ಟೇ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News