ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೋವಿಡ್ ಮರಣ ದರ ಕಡಿಮೆ: ಸಚಿವ ಡಾ.ಕೆ.ಸುಧಾಕರ್

Update: 2020-08-04 17:26 GMT

ಬೆಂಗಳೂರು, ಆ. 4: ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನಿಂದ ಆಗಿರುವ ಮರಣ ದರ ಕಡಿಮೆಯಾಗಿದೆ. ಇದು ಸಮಾಧಾನಕರ ವಿಚಾರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಇತರೆ ರಾಜ್ಯಗಳಿಗಿಂತ ಸಮಾಧಾನಕರವಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಕೋವಿಡ್‍ನಿಂದ ಮರಣ ಹೊಂದುತ್ತಿರುವವವರ ಸಂಖ್ಯೆ ಕರ್ನಾಟಕಕ್ಕಿಂತ ಹೊಸದಿಲ್ಲಿಯಲ್ಲಿ 5 ಪಟ್ಟು ಮತ್ತು ಮಹಾರಾಷ್ಟ್ರದಲ್ಲಿ 3 ಪಟ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ಮರಣ ಪ್ರಮಾಣವು ಇತರೆ ಮಹಾನಗರಗಳಿಗಿಂತ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.

10 ಲಕ್ಷ ಜನಸಂಖ್ಯೆಗೆ ರಾಜ್ಯದಲ್ಲಿ 39 ಮತ್ತು ಬೆಂಗಳೂರಿನಲ್ಲಿ 115 ಕೋವಿಡ್ ಮರಣ ದರವಿದೆ ಎಂದಿರುವ ಅವರು, ಆಸ್ಪತ್ರೆಗಳಲ್ಲಿ ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲು ವಿಳಂಬ ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತದೇಹ ತೆರವುಗೊಳಿಸಲು ವಿಳಂಬ ಮಾಡಿರುವ ಘಟನೆ ನನ್ನ ಗಮನಕ್ಕೆ ಬಂದಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರೀತಿ ನಿರ್ಲಕ್ಷ್ಯ ತೋರುವ ವೈದ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಟ್ವಿಟ್ಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News