ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ, ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ

Update: 2020-08-04 17:54 GMT

ಚಿಕ್ಕಮಗಳೂರು, ಆ.4: ಕಾಫಿನಾಡಿನಲ್ಲಿ ಎರಡು ದಿನಗಳಿಂದ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆಯಿಂದ ಎಡಬಿಡದೇ ಭಾರೀ ಮಳೆಯಾಗುತ್ತಿದೆ. 

ಮಂಗಳವಾರವು ಮಳೆಯ ಆರ್ಭಟ ಮುಂದುವರಿದಿದ್ದು, ಮಳೆಯೊಂದಿಗೆ ಭಾರೀ ಪ್ರಮಾಣದ ಗಾಳಿ ಬೀಸುತ್ತಿರುವುದರಿಂದ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. 

ನಿರಂತರವಾಗಿ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಕೆರೆಕಟ್ಟೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳಸ, ಕುದುರೆಮುಖ, ಸಂಸೆ ಸುತ್ತಮುತ್ತ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಭದ್ರಾನದಿ ತುಂಬಿ ಹರಿಯುತ್ತಿದ್ದು ಹೊರನಾಡು-ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ. 

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸುತ್ತಮುತ್ತ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಪಿಡಬ್ಯೂಡಿ ಇಲಾಖೆಯ ಸಿಬ್ಬಂದಿ 24 ಗಂಟೆ ಎರಡು ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗುಡ್ಡ ಕುಸಿತ ಸಂಭವಿಸಿದರೆ ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಜೆಸಿಬಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಭಾರೀ ಪ್ರಮಾಣದ ಗಾಳಿ ಬೀಸಿದ ಪರಿಣಾಮ ಮಲ್ಲಂದೂರು ಮಾರ್ಗದ 11, ಮಲ್ಲೇನಹಳ್ಳಿ ಮಾರ್ಗದ 7, ಆಲ್ದೂರು ಉಪವಿಭಾಗದ ಹಾಂದಿ ದೊಡ್ಡನಗುಡ್ಡ ಮಾರ್ಗದ 9, ಬನ್ನೂರು 2, ಬಾಸಾಪುರ 3 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಮೆಸ್ಕಾಂ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದು, ದುರಸ್ಥಿ ಕಾರ್ಯ ನಡೆಸಿದ್ದಾರೆ. 

ಮಲೆನಾಡಿನ ಅಲ್ಲಲ್ಲಿ ಮರಗಳು ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚಾರ ವ್ಯವಸ್ಥೆ ತೊಂದರೆಯಾಗಿರುವ ಬಗ್ಗೆ ವರದಿಯಾಗಿದೆ. ಮೂಡಿಗೆರೆ ತಾಲೂಕಿನ ಸುಂಕಸಾಲೆ, ಕಳಸ, ಜಾವಳಿ, ಕೊಟ್ಟಿಗೆಹಾರ, ಬಣಕಲ್, ಕೊಡೆಬೈಲ್, ಕೊಗಿಲೆ, ಗುತ್ತಿ, ಮೂಲರಹಳ್ಳಿ, ದೇವರಮನೆ, ಬಿದಿರುತಳ, ಆಲೆಖಾನ್ ಭಾಗದಲ್ಲಿ ಭಾರೀ ಮಳೆಯಾಗಿದೆ. ಕೊಪ್ಪ ತಾಲೂಕಿನ ಹರಿಹರಪುರ, ಜಯಪುರ, ಬಸರಿಕಟ್ಟೆ, ಕುದುರೆಗುಂಡಿ, ಸಿದ್ಧರಮಠ ಸುತ್ತಮುತ್ತ ಭಾರೀ ಗಾಳಿಯೊಂದಿಗೆ ಮಳೆಯಾಗಿದೆ. ಇನ್ನು ನರಸಿಂಹರಾಜಪುರ, ಶೃಂಗೇರಿ, ಬಾಳೆಹೊನ್ನೂರು ಸುತ್ತಮುತ್ತ ಉತ್ತಮ ಮಳೆಯಾಗಿದೆ. 

ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತ ಸೋಮವಾರ ಬೆಳಗ್ಗೆಯಿಂದ ಮಳೆಯಾಗುತ್ತಿದೆ. ಮಳೆಯೊಂದಿಗೆ ಭಾರೀ ಪ್ರಮಾಣದ ಗಾಳಿ ಬೀಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಯಲು ಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. 

ಮೂಡಿಗೆರೆ ತಾಲೂಕಿನ ಸಿಕ್ರೆಬೈಲ್ ಗ್ರಾಮದಲ್ಲಿ ಸೋಮವಾರ ಸಂಜೆ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜಬ್ದಾರಿಯಿಂದ ವರ್ತಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷ ರತನ್ ಅವರ ಗಮನಕ್ಕೆ ತಂದಿದ್ದು, ನಂತರ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ವಿಷಯ ತಿಳಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಶಾಸಪ ಎಂ.ಪಿ.ಕುಮಾರಸ್ವಾಮಿಯವರು ಈ ಸಂಬಂದ ಅಧಿಕಾರಿಗಳನ್ನು ಎಚ್ಚರಿಸಬೇಕಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News