ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಧಾನಿಗೆ ಪತ್ರ

Update: 2020-08-04 18:30 GMT

ಬೆಂಗಳೂರು, ಆ.4: ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಹಿತಿಗಳು ಕಸಾಪ ಅಧ್ಯಕ್ಷರ ಜತೆಗೂಡಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.

ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಸೇರಿದಂತೆ ಹಲವರು ಪ್ರಧಾನಿ ಮೋದಿಗೆ ಮನವಿ ಮಾಡಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಗೂ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಜಾರಿಗೊಳಿಸುವ ಸಂಬಂಧ ಪತ್ರ ಬರೆಯಲಾಗಿದೆ. ಈ ಪತ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕೆಂಬ ಶೀಘ್ರ ನಿರ್ಣಯ ತರಬೇಕು. ನೆರೆ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರಗಳಂತೆ ವಿಶೇಷ ಕಾನೂನು ಜಾರಿಗೊಳಿಸಿ ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ 15 ವರ್ಷಗಳಿಂದ ಕರ್ನಾಟದಲ್ಲಿದ್ದು, ಕನ್ನಡವನ್ನು ಓದಲು, ಮಾತನಾಡಲು ಬರುವವರಿಗೆ ಉದ್ಯೋಗ ನೀಡುವಾಗ ಆದ್ಯತೆಯಿಂದ ಪರಿಗಣಿಸುವ ನಿಯಮಗಳನ್ನೂ ಜಾರಿಗೆ ತರಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಹಿರಿಯ ಸಾಹಿತಿಗಳಾದ ಡಾ.ಎಸ್.ಎಲ್.ಭೈರಪ್ಪ ಮತ್ತು ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ರಾಜ್ಯಭಾಷೆಯಲ್ಲಿ ಶಿಕ್ಷಣ ಒದಗಿಸುವುದರ ಪ್ರಸ್ತಾಪವಿದೆ. ಆದರೆ, ಅದು ಕಡ್ಡಾಯವಾಗಿರದೆ ಐಚ್ಛಿಕಗೊಳಿಸಲಾಗಿದೆ. ಇದರಿಂದ ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆಗೆ ಸಿಗಬೇಕಾದ ಮಾನ್ಯತೆ ಸಿಗುವುದಿಲ್ಲ ಎಂದು ಅವರುಗಳು ಪ್ರತಿಪಾದಿಸಿದ್ದಾರೆ.

ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನಲ್ಲೂ ರಾಜ್ಯ ಸರಕಾರದ ವಾದಕ್ಕೆ ಬೆಂಬಲ ಸಿಕ್ಕಿಲ್ಲ. ಕಲಿಕಾ ಮಾಧ್ಯಮದ ಆಯ್ಕೆ ಪಾಲಕರ ಹಕ್ಕು ಎಂದು ತೀರ್ಪು ನೀಡಿದೆ. ಹೀಗಾಗಿ, ಹಳ್ಳಿಗಳಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿವೆ. ಹಿಂದಿನ ಸಮ್ಮಿಶ್ರ ಸರಕಾರವು ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ನಿರ್ಧರಿಸುವ ಮೂಲಕ ರಾಜ್ಯಭಾಷೆಯ ಅಸ್ತಿತ್ವಕ್ಕೆ ಕುಠಾರಪ್ರಾಯವಾಗಿ ನಡೆದುಕೊಂಡಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News