ಮರಾಠಿಯಲ್ಲಿ ಸಚಿವ ಶ್ರೀಮಂತ ಪಾಟೀಲ ಭಾಷಣ: ಕ್ರಮಕ್ಕೆ ಒತ್ತಾಯಿಸಿ ಡಿಸಿ ಕಚೇರಿ ಆವರಣದಲ್ಲಿ ಕರವೇ ಪ್ರತಿಭಟನೆ

Update: 2020-08-04 18:31 GMT
ಸಚಿವ ಶ್ರೀಮಂತ ಪಾಟೀಲ

ಬೆಳಗಾವಿ, ಆ.4: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮರಾಠಿಯಲ್ಲಿ ಭಾಷಣ ಮಾಡಿದ ಜವಳಿ ಸಚಿವ ಶ್ರೀಮಂತ ಪಾಟೀಲ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದ ಸದಸ್ಯರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮರಾಠಿಗರು ಹಾಗೂ ಕನ್ನಡಿಗರು ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಆದರೆ, ಶ್ರೀಮಂತ ಪಾಟೀಲರು ಕಾರ್ಯಕ್ರಮದಲ್ಲಿ ಮರಾಠಿ ಉದ್ಯಮಿಯೊಬ್ಬರು ಭಾಗವಹಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಮರಾಠಿಯಲ್ಲಿ ಭಾಷಣ ಮಾಡಿ ಕನ್ನಡವನ್ನು ನಿರ್ಲಕ್ಷಿಸಿದ್ದಾರೆ. ಆ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದ್ದ ಎಲ್ಲ ಫಲಕಗಳೂ ಮರಾಠಿಯಲ್ಲಿಯೇ ಇದ್ದವು. ಈ ಹಿನ್ನೆಲೆಯಲ್ಲಿ ಪಾಟೀಲರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಸಚಿವರ ಫೋಟೊಗಳನ್ನು ತುಳಿದು, ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗೇನಟ್ಟಿ, ರಾಜ್ಯ ಸಂಚಾಲಕ ಮಹಾದೇವ ತಳವಾರ, ಸುರೇಶ್ ಗವನ್ನವರ, ನಿಂಗರಾಜ ಗುಂಡ್ಯಾಗೊಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News