ಯುಪಿಎಸ್‍ಸಿಯಲ್ಲಿ 626ನೇ ರ‍್ಯಾಂಕ್ ಗಳಿಸಿದ ವಿಜಯಪುರದ ಸವಿತಾ

Update: 2020-08-05 06:28 GMT

ವಿಜಯಪುರ : ಮಂಗಳವಾರ ಘೋಷಣೆಯಾದ ಯುಪಿಎಸ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜಯಪುರದ ಪ್ರತಿಭಾನ್ವಿತ ಯುವತಿ ಸವಿತಾ ಗೊತ್ಯಾಲ್ ಅವರು 626ನೇ ರ‍್ಯಾಂಕ್ ಗಳಿಸಿ ಜಿಲ್ಲೆಗೆ ಹೆಮ್ಮೆಯುಂಟು ಮಾಡಿದ್ದಾರೆ. ಸವಿತಾ ಅವರ ಹಿರಿಯ ಸೋದರಿ ಅಶ್ವಿನಿ ಈಗಾಗಲೇ ಯುಪಿಎಸ್‍ಸಿಯಲ್ಲಿ ತೇರ್ಗಡೆಗೊಂಡಿದ್ದು ಕಳೆದ ನಾಲ್ಕು ವರ್ಷಗಳಿಂದ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಹಿರಿಯ ಸೋದರಿಯಿಂದಲೇ ಸ್ಫೂರ್ತಿ ಪಡೆದ ಸವಿತಾ ಯುಪಿಎಸ್‍ಸಿ ಪರೀಕ್ಷೆಗೆ ಅತ್ಯಂತ ಮುತುವರ್ಜಿಯಿಂದ ತಯಾರಿ ನಡೆಸಿ ಈಗ ತಮ್ಮ ಸಾಧನೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅವರ ತಂದೆ ಸಿದ್ದಪ್ಪ ಗೊತ್ಯಾಲ್ ಅವರ ಸಂತಸವಂತೂ ಹೇಳತೀರದು. ''ನನ್ನ ಇಬ್ಬರು ಪುತ್ರಿಯರೂ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ ಬಗ್ಗೆ ಖುಷಿಯಿದೆ. ನನ್ನ ಪುತ್ರಿಯರ ಬಗ್ಗೆ ನನಗೆ ಹೆಮ್ಮೆಯಿದೆ,'' ಎಂದು ಅವರು ಹೇಳುತ್ತಾರೆ.

ಇಂಡಿ ತಾಲೂಕಿನ ಅತರ್ಗ ಗ್ರಾಮದ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಸವಿತಾ ಮುಂದೆ ಪಿಡಿಜೆ ಹೈಸ್ಕೂಲಿನಲ್ಲಿ ಶಿಕ್ಷಣ ಮುಂದುವರಿಸಿದ್ದರು. ಪದವಿಪೂರ್ವ ಶಿಕ್ಷಣಕ್ಕಾಗಿ ಆಕೆ ಧಾರವಾಡದ ಜೆಎಸ್‍ಎಸ್ ಕಾಲೇಜಿಗೆ ಸೇರ್ಪಡೆಗೊಂಡು ನಂತರ ಬೆಂಗಳೂರಿನ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸಾಯನ್ಸ್ ನಲ್ಲಿ ಬಿಇ ಪದವಿ ಪಡೆದಿದ್ದರು.

ಯುಪಿಎಸ್‍ಸಿ ಪರೀಕ್ಷೆಯ ತರಬೇತಿಯನ್ನು ಆಕೆ ದಿಲ್ಲಿಯಲ್ಲಿ ಪಡೆದಿದ್ದರು. ''ನನಗೆ ಪ್ರತಿ ಹಂತದಲ್ಲೂ 2016 ಹಾಗೂ 2017ರಲ್ಲಿ ಯುಪಿಎಸ್‍ಸಿ ತೇರ್ಗಡೆಗೊಂಡ ನನ್ನ ಸೋದರಿ ಮಾರ್ಗದರ್ಶನ ನೀಡಿದ್ದಾಳೆ,'' ಎಂದು ತಮ್ಮ ಸೋದರಿಯ ಬಗ್ಗೆ ಸವಿತಾ ಹೆಮ್ಮೆಯ ಮಾತುಗಳನ್ನಾಡುತ್ತಾರೆ.

ಆಕೆಯ ಸೋದರ ಕಾರ್ತಿಕ್ ಕೂಡ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆಗಾಗಿ ದಿಲ್ಲಿಯಲ್ಲಿ ತರಬೇತಿ ಪಡೆಯುತ್ತಿದ್ದು ಪ್ರಸ್ತುತ ಅಲ್ಲಿನ ಕೋವಿಡ್ ಸಮಸ್ಯೆಯಿಂದಾಗಿ ಊರಿಗೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News