×
Ad

ಅಯೋಧ್ಯೆಯಂತೆ ಕಾಶಿ, ಮಥುರಾದಲ್ಲಿರುವ ಮಸೀದಿಗಳನ್ನು ಕೂಡ ತೆರವುಗೊಳಿಸುತ್ತೇವೆ: ವಿವಾದ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

Update: 2020-08-05 16:36 IST

ಶಿವಮೊಗ್ಗ : ಅಯೋಧ್ಯೆಯಂತೆ ಕಾಶಿ ಮತ್ತು ಮಥುರಾದಲ್ಲಿ ಮಂದಿರಗಳ ಆವರಣದಲ್ಲಿರುವ ಮಸೀದಿಗಳನ್ನು ಕೂಡ ತೆರವುಗೊಳಿಸಿಯೇ ತಿರುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕೋಟೆ ಶ್ರೀ ಸೀತಾ ರಾಮಾಂಜನೇಯ ದೇವಾಲಯದಲ್ಲಿ ಶ್ರೀ ರಾಮತಾರಕ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಯೋಧ್ಯೆಯ ರೀತಿಯಲ್ಲಿಯೇ ಕಾಶಿ ಮತ್ತು ಮಥುರಾದ ಆವರಣದಲ್ಲಿರುವ ಮಸೀದಿಗಳನ್ನು ಕೂಡ ದ್ವಂಸ ಮಾಡಬೇಕಿದೆ. ಅಲ್ಲಿ ದೇವರ ದರ್ಶನಕ್ಕೆ  ತೆರಳಿದರೆ ನಾವು ಗುಲಾಮರಂತೆ ಭಾಸವಾಗುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದಂತ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ. ಅಯೋಧ್ಯೆಯಂತೆ ಕಾಶಿ ಮತ್ತು ಮಥುರಾದಲ್ಲಿ ಮಂದಿರಗಳ ಆವರಣದಲ್ಲಿರುವ ಮಸೀದಿಗಳನ್ನು ಕೂಡ ತೆರವುಗೊಳಿಸಿಯೇ ತಿರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. 

ಶ್ರದ್ಧಾ ಕೇಂದ್ರಗಳಲ್ಲಿ ನಮ್ಮ ದೇವಸ್ಥಾನಗಳು ಧ್ವಂಸವಾಗಿರುವುದನ್ನು ನಾವು ಕಾಣುತ್ತೇವೆ. ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿ ತೆರವುಗೊಳಿಸಲಾಗಿದೆ. ಶ್ರದ್ಧಾ ಕೇಂದ್ರಗಳಲ್ಲಿ ಮಸೀದಿಗಳು ಮುಕ್ತವಾಗಬೇಕಿದೆ. ಲಾಠಿ, ಗೋಲಿ ಖಾಯೆಂಗೆ ಮಂದೀರ್ ವಹೀ ಬನಾಯೇಂಗೆ ಎಂದು ಹೇಳಿದ್ದ ರೀತಿಯಲ್ಲಿಯೇ ಇಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಅದೇ ರೀತಿಯಲ್ಲಿ ಕಾಶಿ ವಿಶ್ವನಾಥನ ಮಂದಿರದ ಆವರಣದಲ್ಲಿರುವ ಮಸೀದಿ ಮತ್ತು ಮಥುರಾದಲ್ಲಿರುವ ಮಸೀದಿ ಕೂಡಾ ತೆರವುಗೊಳಿಸಬೇಕಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News