ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

Update: 2020-08-05 12:24 GMT

ಚಿಕ್ಕಮಗಳೂರು, ಆ.5: ಕಾಫಿನಾಡಿನಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ ಆರ್ಭಟಿಸಿದ್ದ ಮಹಾಮಳೆ ಈ ಬಾರಿಯೂ ಆರ್ಭಟಿಸುವ ಲಕ್ಷಣಗಳು ಗೋಚರಿಸಿದ್ದು, ಮಲೆನಾಡಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಗೆ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲೆನಾಡು ಪ್ರಮುಖ ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಸ್ತಬ್ಧಗೊಂಡಿದ್ದರೇ ಮಲೆನಾಡು ಭಾಗದಲ್ಲಿ ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಇಡೀ ಮಲೆನಾಡಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭೂ ಕುಸಿತ, ಮನೆಗಳಿಗೆ ಹಾನಿಯಾದ ಘಟನೆಗಳು ಮಲೆನಾಡಿನಲ್ಲಿ ಸಾಮಾನ್ಯ ಎಂಬಂತಾಗಿದೆ.

ಕಳೆದ ರವಿವಾರ ಜಿಲ್ಲಾದ್ಯಂತ ಸಾಧಾರಣ ಮಳೆಯಾಗಿದ್ದು, ಸೋಮವಾರದಿಂದ ಜಿಲ್ಲೆಯಲ್ಲಿ ವರುಣಾರ್ಭಟ ಬಿರುಸುಗೊಂಡಿದ್ದು, ಬುಧವಾರ ಸಂಜೆಯವರೆಗೂ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಆರ್ಭಟಿಸಿದ ಮಳೆ ಬುಧವಾರ ಸಂಜೆವರೆಗೂ ನಿರಂತರವಾಗಿ ಸುರಿದಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಬುಧವಾರ ಬೆಳಗ್ಗೆಯಿಂದಲೇ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದಲೂ ಭಾರೀ ಮಳೆಯಾಗುತ್ತಿದ್ದು, ಬಣಕಲ್, ಮೂಡಿಗೆರೆ ಪಟ್ಟಣ, ಕಿರುಗುಂದ, ಗೋಣಿಬೀಡು, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಜಾವಳಿ, ಹಿರೇಬೈಲ್, ಕಳಸ, ಕುದುರೆಮುಖ, ಹೊರನಾಡು ವ್ಯಾಪ್ತಿಯಲ್ಲಿ ನಿರಂತರವಾಗಿ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ತಾಲೂಕಿನಲ್ಲಿ ಹರಿಯುವ ಹೇಮಾವತಿ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಬುಧವಾರ ಬೆಳಗ್ಗೆ ಕೊಟ್ಟಿಗೆಹಾರದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಪಟ್ಟಣದ ಕೆಲ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಸಮೀಪದ ಫಲ್ಗುಣಿ ಗ್ರಾಮದಲ್ಲಿ ಮರವೊಂದು ರಸ್ತೆಗೆ ಅಡ್ಡಬಿದ್ದ ಪರಿಣಾಮ ಕೆಲಹೊತ್ತು ವಾಹನ ಸಂಚಾರ ಸ್ತಬ್ಧಗೊಂಡಿತ್ತು. 

ಹರಿದ ಪರಿಣಾಮ ಗೌಡಹಳ್ಳಿ-ಹೊರಟ್ಟಿ ಸಂಪರ್ಕದ ಸೇತುವೆಯೊಂದು ಹಳ್ಳದ ನೀರಿನಲ್ಲಿ ಮುಳುಗಿದ ಘಟನೆ ವರದಿಯಾಗಿದೆ. ತಾಲೂಕಿನಲ್ಲಿ ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಹಳ್ಳಕೊಳ್ಳಗಳು, ಸಣ್ಣ ನದಿ ತೊರೆಗಳೂ ತುಂಬಿ ಹರಿದು ನಾಟಿ ಮಾಡಿದ ಭತ್ತದ ಗದ್ದೆಗಳೂ ಜಲಾವೃತಗೊಂಡಿದ್ದು, ಭತ್ತದ ಕೃಷಿಕರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಇನ್ನು ತಾಲೂಕಿನ ಅಣಜೂರು, ಹ್ಯಾಂಡ್‍ಪೋಸ್ಟ್, ಮುತ್ತಿಗೆಪುರ, ಕಿರುಗುಂದ, ಗೋಣಿಬೀಡು, ಕಳಸ, ಕುದುರೆಮುಖ, ಜಾವಳಿ, ಬಾಳೆಹೊಳೆಯಂತಹ ನೂರಾರು ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಬದಿಯ ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ, ಬುಧವಾರ ಇಡೀ ದಿನ ಮಳೆಯಾದ ಪರಿಣಾಮ ಧರೆ ಕುಸಿತ, ಮರಗಳು ರಸ್ತೆ ಗುರುಳಿದ್ದು, ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ. ಕಳೆದ ಬಾರೀ ಅತಿವೃಷ್ಟಿಗೆ ಸಿಲುಕಿ ಭೂ ಕುಸಿತದಿಂದ ನಲುಗಿದ್ದ ದುರ್ಗದಹಳ್ಳಿಯಲ್ಲಿ ಈ ಬಾರಿಯೂ ಭೂ ಕುಸಿತ ಸಂಭವಿಸಿದ್ದು, ಗ್ರಾಮದ ದೇವಾಲಯದ ಸಮೀಪದಲ್ಲಿ ಗುಡ್ಡ ಕುಸಿಯಲಾರಂಭಿಸಿದೆ ಎಂದು ತಿಳಿದುಬಂದಿದೆ. 

ನರಸಿಂಹರಾಜಪುರ ತಾಲೂಕಿನಲ್ಲೂ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿದ್ದು, ತಾಲೂಕಿನಲ್ಲಿ ಹರಿಯುವ ತುಂಗಾ ನದಿ ಸೇರಿದಂತೆ ಸಣ್ಣ ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬುಧವಾರ ಬೆಳಗ್ಗೆಯಿಂದ ಸುರಿದ ಮಳೆಯಿಂದಾಗಿ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ತಾಲೂಕಿನ ಶಂಕರಾಪುರ-ಮುಡಬ ಗ್ರಾಮಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ತುಂಗಾ ನದಿಯ ನೆರೆ ನೀರಿನಿಂದ ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ತಹಶೀಲ್ದಾರ್ ರೇಣುಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಈ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆ. ತಾಲೂಕಿನ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿಯ ದಡದಲ್ಲಿರುವ ಮಾಗುಂಡಿ, ಮಹಲ್‍ಗೋಡು ಮತ್ತಿತರ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ತಹಶೀಲ್ದಾರ್ ಸೂಚಿಸಿದ್ದಾರೆ. ಕಳೆದ ಬಾರೀ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಭದ್ರಾ ನದಿಯ ನೆರೆ ನೀರಿನಿಂದಾಗಿ ನದಿ ಪಾತ್ರದ ಮನೆಗಳು ಜಲಾವೃತಗೊಂಡಿದ್ದವು. ಮಾಗುಂಡಿ ಬಳಿ ಭದ್ರಾ ನದಿಯ ನೆರೆ ನೀರು ಕಳಸ ಹಾಗೂ ಬಾಳೆಹೊನ್ನೂರು ಸಂಪರ್ಕ ರಸ್ತೆಗೆ ನುಗ್ಗಿರುವು ಪರಿಣಾಮ ಈ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲೂ ಕಳೆದ ಮೂರು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಕಿಗ್ಗಾ, ನೆಮ್ಮಾರ್, ಸೇರಿದಂತೆ ಪಟ್ಟಣ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಪಟ್ಟಣ ಸಮೀಪದಲ್ಲಿ ಹರಿಯುವ ತುಂಗಾ ನದಿ ಸತತ ಮಳೆಯಿಂದಾಗಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ನದಿಯ ನೀರು ಅಕ್ಕಪಕ್ಕದ ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ನುಗ್ಗುತ್ತಿದೆ. ಶೃಂಗೇರಿಯಿಂದ ಎಸ್.ಕೆ.ಬಾರ್ಡರ್ ಮಾರ್ಗವಾಗಿ ಮಂಗಳೂರು ಕಡೆಗೆ ಹೋಗುವ ರಸ್ತೆ ಮಧ್ಯೆ ಬೃಹತ್ ಮರಗಳು ಧರೆಗುರುಳಿದ್ದು, ಬುಧವಾರ ಈ ಮಾರ್ಗದಲ್ಲಿ ರಸ್ತೆ ಸಂಪರ್ಕ ಕೆಲ ಹೊತ್ತು ಕಡಿತಗೊಂಡಿತ್ತು. ಇನ್ನು ಕೊಪ್ಪ ತಾಲೂಕು ವ್ಯಾಪ್ತಿಯಲ್ಲೂ ಎಡಬಿಡದೇ ಮಳೆಯಾಗುತ್ತಿದ್ದು, ಸತತ ಮಳೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನಲ್ಲಿ ಹರಿಯುವ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮಳೆ ಮುಂದುವರಿದಲ್ಲಿ ಹಲವು ರಸ್ತೆಗಳು, ಅಡಿಕೆ, ಭತ್ತದ ಗದ್ದೆಗಳು ಜಲಾವೃತಗೊಳ್ಳುವುದು ನಿಚ್ಚಳವಾಗಿದೆ.

ಬುಧವಾರ ಚಿಕ್ಕಮಗಳೂರು ತಾಲೂಕು ಸೇರಿದಂತೆ ಬಯಲು ಭಾಗದ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ. ಚಿಕ್ಕ,ಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ವೇಳೆ ಸಾಧಾರಣ ಮಳೆಯಾಗಿದ್ದರೇ, ಮಧ್ಯಾಹ್ನದ ಬಳಿಕ ಭಾರೀ ಸುರಿದಿದೆ. ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಬುಧವಾರ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ. ತರೀಕೆರೆ ಪಟ್ಟಣದ ಎಪಿಎಂಸಿ ಆವರಣದಲ್ಲಿದ್ದ ಟೀ ಅಂಗಡಿಯೊಂದರ ಮೇಲೆ ಬುಧವಾರ ಮಧ್ಯಾಹ್ನ ಮರವೊಂದು ದಿಢೀರ್ ಉರುಳಿ ಬಿದ್ದಿದ್ದು, ಅಂಗಡಿ ಮಾಲಕ ಯೋಗೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೀ ಅಂಗಡಿ ಸಂಪೂರ್ಣ ಹಾನಿಗೊಂಡಿದೆ.

ಹೆಬ್ಬಾಳೆ ಸೇತುವೆ ಮುಳುಗಡೆ: ಮೂಡಿಗೆರೆ ತಾಲೂಕಿನ ಯಾತ್ರಾಸ್ಥಳ ಹೊರನಾಡು ಗ್ರಾಮ ಸಂಪರ್ಕಕ್ಕೆ ಕಳಸ ಪಟ್ಟಣ ಸಮೀಪದಲ್ಲಿ ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬುಧವಾರ ಮಧ್ಯಾಹ್ನದ ವೇಳೆಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಬಂದ್ ಆಗಿದೆ. ಪ್ರವಾಸಿಗರು ಹೊರನಾಡು ಸಂಪರ್ಕಕ್ಕೆ ದೂರದ ಹಳುವಳ್ಳಿ ಮಾರ್ಗವಾಗಿ ಹೋಗುವಂತಾಗಿದೆ. 

ಮನೆ ಮೇಲೆ ಉರುಳಿದ ಮರ: ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆ, ಗಾಳಿಗೆ ಬೃಹತ್ ಮರವೊಂದು ರವಿಚಂದ್ರನಾಯ್ಕ್ ಎಂಬವರ ಮನೆ ಮೇಲೆ ಉರುಳಿ ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಮನೆ ಸಮೀಪದಲ್ಲೇ ಇದ್ದ ಪ್ರಕಾಶ್ ಎಂಬವರಿಗೆ ಸೇರಿದ ಬೊಲೇರೋ ವಾಹನವೊಂದ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ರವಿಚಂದ್ರ ಕುಟುಂಬ ಸದ್ಯ ಮನೆ ಕಳೆದುಕೊಂಡು ಅತಂತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News