ಕೊಡಗು ಮಹಾಮಳೆಯಿಂದ ಎಲ್ಲೆಲ್ಲಿ ಏನೇನಾಗಿದೆ: ಇಲ್ಲಿದೆ ಮಾಹಿತಿ

Update: 2020-08-05 13:20 GMT

ಮಡಿಕೇರಿ,ಆ.5 : ಶ್ರೀಮಂಗಲ ಹೋಬಳಿ ಹರಿಹರ ಗ್ರಾಮದ ನವೀನ್ ಎಂಬುವವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಮೇಲ್ಛಾವಣಿಗೆ ಹಾಕಲಾದ ಶೀಟ್‍ಗಳು ಹಾನಿಯಾಗಿದೆ. ಚೆಸ್ಕಾಂ ಇಲಾಖಾ ಪರಿಹಾರ ತಂಡ ಭೇಟಿ ನೀಡಿ ಸೂಕ್ತ ಕ್ರಮ ವಹಿಸಲಾಗಿದೆ. ಬಿಟ್ಟಂಗಾಲ-ಬಿ.ಶೆಟ್ಟಿಗೇರಿ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ. ಸೋಮವಾರಪೇಟೆ ತಾಲ್ಲೂಕು ಮಕ್ಕಂದೂರು (ಉದಯಗಿರಿ) ಬಳಿ ಮರ ಬಿದ್ದು, ಮಡಿಕೇರಿ-ಸೋಮವಾರಪೇಟೆ ರಸ್ತೆ ಬಂದ್ ಆಗಿದ್ದು, ತೆರವುಗೊಳಿಸಲಾಗಿದೆ. ಕ್ಲಬ್ ಮಹೀಂದ್ರ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ.

ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ತಡರಾತ್ರಿ ಬರೆ ಜರಿದಿದ್ದು, ಪರಿಹಾರ ತಂಡ ಧಾವಿಸಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಈ ಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಗಿ, ನಿವಾಸಿಗಳು ಒಪ್ಪದ್ದರಿಂದ, ರಾತ್ರಿ ಬೀಟ್ ಪೊಲೀಸರಿಗೆ ಆಗಾಗ್ಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ತಿಳಿಸಲಾಗಿದೆ. 

ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಪ್ರವಾಹ ಉಂಟಾಗುವ ಸಂಭವವಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಪಂಚಾಯತಿ ವತಿಯಿಂದ ಮಾಹಿತಿ ನೀಡಲಾಗಿದೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಸ್ಥಳಕ್ಕೆ ರಿವರ್ ರಾಫ್ಟಿಂಗ್ ತಂಡವನ್ನು ನಿಯೋಜಿಸಲಾಗಿದೆ.  

ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪದಲ್ಲಿ ಸಹ ಭಾರೀ ಮಳೆಯಿಂದ ಪ್ರವಾಹ ಉಂಟಾಗುವ ಸಂಭವವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಿವರ್ ರಾಫ್ಟಿಂಗ್ ತಂಡ ಮತ್ತು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಮಡಿಕೇರಿ ನಗರದ ಮೈತ್ರಿಹಾಲ್ ನ ಶೀಟ್ ಗಳು ಹಾರಿ ಹೋಗಿದ್ದು, ರಿಪೇರಿಗೆ ಕ್ರಮ ವಹಿಸಲಾಗಿದೆ. 

ಪ್ರಕೃತಿ ವಿಕೋಪದ ಮಾಹಿತಿ ಬಂದೊಡನೆ ಜಿಲ್ಲಾಡಳಿತದ ಪರಿಹಾರ ತಂಡವು ಕಾರ್ಯೋನ್ಮುಖವಾಗುತ್ತಿದ್ದು, ಸ್ಥಳೀಯ ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಸ್ಥಳೀಯ ಜನರು ಮತ್ತು ಸ್ವಯಂ ಸೇವಕರ ನೆರವಿನಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ. 

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.   

ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಸಂ:221077 ಮತ್ತು ವಾಟ್ಸಪ್ ಸಂ: 8550001077 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News