ರಾಜ್ಯದಲ್ಲಿ ಜಿಮ್-ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಮಾರ್ಗಸೂಚಿ ಬಿಡುಗಡೆ

Update: 2020-08-05 13:37 GMT

ಬೆಂಗಳೂರು, ಆ. 5: ರಾಜ್ಯದಲ್ಲಿ ನಾಲ್ಕು ತಿಂಗಳುಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಜಿಮ್ ಹಾಗೂ ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಮಾರ್ಗಸೂಚಿ ಪ್ರಕಟಿಸಿದ್ದು, ಸೋಂಕು ನಿಯಂತ್ರಣಕ್ಕೆ ಸೂಕ್ತ ಮುನ್ನಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಬುಧವಾರ ಮಾರ್ಗಸೂಚಿ ಬಿಡುಗಡೆ ಮಾಡಿದ ಯುವ ಸಬಲೀಕರಣ ಮತ್ತು ಕ್ರೀಡೆ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಜಿಮ್ ಹಾಗೂ ಫಿಟ್ನೆಸ್ ಕೇಂದ್ರಗಳ ಬಳಕೆದಾರರು ಅಕಾಡೆಮಿ/ಜಿಮ್-ಫಿಟ್ನೆಸ್ ಕೇಂದ್ರವನ್ನು ಪ್ರವೇಶಿಸುವ ಸಂದರ್ಭದಲ್ಲಿ ದೇಹದ ಉಷ್ಣಾಂಶವನ್ನು ಪರೀಕ್ಷಿಸಿ, ಕೈಗಳನ್ನು ಸೋಂಕು ನಿವಾರಕದಿಂದ ಶುಚಿಗೊಳಿಸಿ ಪ್ರವೇಶ ನೀಡುವುದು. ಜ್ವರ, ಕೆಮ್ಮು, ಶೀತ ಬಾಧೆ ಹೊಂದಿರುವವರಿಗೆ ಪ್ರವೇಶ ನೀಡಬಾರದು ಎಂದು ನಿರ್ದೇಶಿಸಿದರು.

ಜಿಮ್-ಫಿಟ್ನೆಸ್ ಕೇಂದ್ರದಲ್ಲಿ ಕಡ್ಡಾಯವಾಗಿ ಶುಚಿತ್ವವನ್ನು ಖಾತರಿಪಡಿಸುವುದು. ಬಳಕೆದಾರರ ಸಂಪೂರ್ಣ ವಿಳಾಸ ಮತ್ತು ಸಂಪರ್ಕ ದೂರವಾಣಿ/ಮೊಬೈಲ್, ವಯಸ್ಸು ಮತ್ತಿತರ ವಿವರ ಒಳಗೊಂಡಂತೆ ಪೂರ್ವಭಾವಿ ನೋಂದಾವಣಿ ಕೈಗೊಂಡು, ದಾಖಲೆ ನಿರ್ವಹಿಸುವುದು ಹಾಗೂ ಪ್ರತಿದಿನದ ಬಳಕೆದಾರರು ಕೇಂದ್ರ ಪ್ರವೇಶಿಸಿದ ಹಾಗೂ ನಿರ್ಗಮಿಸಿದ ಸಮಯ ದಾಖಲಿಸುವುದು ಕಡ್ಡಾಯವಾಗಿದೆ.

ಕೋವಿಡ್-19 ನಿಯಂತ್ರಣಾ ಪ್ರದೇಶ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಜಿಮ್ ಮತ್ತು ಫಿಟ್ನೆಸ್ ಕೇಂದ್ರಗಳನ್ನು ತೆರೆಯುವುದನ್ನು ನಿಷೇಧಿಸಿದೆ. ಸರಕಾರ ಆರೋಗ್ಯ ಸಂಬಂಧಿತ ಮಾದರಿ ನಿರ್ವಹಣಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಕ್ರೀಡಾಪಟು/ಜಿಮ್-ಫಿಟ್ನೆಸ್ ಕೇಂದ್ರದ ಬಳಕೆದಾರರು ಮತ್ತು ಸಿಬ್ಬಂದಿ ಕನಿಷ್ಟ 6 ಅಡಿ ಅಂತರವನ್ನು ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು.

ಎಲ್ಲ ಬಳಕೆದಾರರು ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು. ಜಿಮ್-ಫಿಟ್ನೆಸ್ ಕೇಂದ್ರವನ್ನು ಪ್ರತಿದಿನ ಸೋಂಕು ನಿವಾರಕಗಳಿಂದ ಶುಚಿಗೊಳಿಸುವುದು. 10 ವರ್ಷ ವಯೋಮಾನದೊಳಗಿನವರು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಮತ್ತು ಗರ್ಭಿಣಿಯರಿಗೆ ಪ್ರವೇಶ ನಿಷೇಧಿಸಿದೆ. ಈ ಕೇಂದ್ರದಲ್ಲಿ ನೀರು ಹಾಗೂ ಸಾಬೂನಿನ ಸೌಕರ್ಯ ಕಲ್ಪಿಸುವುದು. ಜಿಮ್ ಬಳಕೆದಾರರು ಆರೋಗ್ಯ ಸೇತು ಆ್ಯಪ್ ಬಳಸುವುದನ್ನು ಉತ್ತೇಜಿಸಬೇಕು.
ಒಬ್ಬ ಜಿಮ್ ಬಳಕೆದಾರನಿಗೆ ಅಂದಾಜು 4 ಚದರ ಮೀಟರ್ ಸ್ಥಳಾವಕಾಶ ನಿಗಧಿಪಡಿಸಿ, ಲಭ್ಯ ಸ್ಥಳಾವಕಾಶದ ಆಧಾರದಲ್ಲಿ ಒಂದು ಪಾಳಿಯಲ್ಲಿ ಭಾಗವಹಿಸುವ ಒಟ್ಟು ಬಳಕೆದಾರರು ಹಾಗೂ ಪ್ರಶಿಕ್ಷಕರ ಸಂಖ್ಯೆಯನ್ನು ನಿಗದಿಪಡಿಸುವುದು. ಸಂಪರ್ಕ ರಹಿತ ನಗದು ವ್ಯವಹಾರ (ಆನ್‍ಲೈನ್ ಪಾವತಿ ವ್ಯವಸ್ಥೆ) ಅಳವಡಿಸಿಕೊಳ್ಳುವುದು. ಜಿಮ್-ಫಿಟ್ನೆಸ್ ಕೇಂದ್ರದಲ್ಲಿ ಸಾಕಷ್ಟು ಪ್ರಮಾಣದ ಸೋಂಕು ನಿವಾರಕ ಕಾಗದವನ್ನು ಒದಗಿಸತಕ್ಕದ್ದು ಹಾಗೂ ಬಳಕೆದಾರರಿಗೆ ಇವುಗಳನ್ನು ಬಳಸಿ ತಾವು ಬಳಸುವ ಉಪಕರಣಗಳನ್ನು ಶುಚಿಗೊಳಿಸಿಕೊಳ್ಳಲು ಉತ್ತೇಜಿಸತಕ್ಕದ್ದು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News