ಚಿಕ್ಕಮಗಳೂರು: ಕೊರೋನ ಸೋಂಕಿಗೆ ವೃದ್ಧ ಬಲಿ; ಹೊಸದಾಗಿ 47 ಮಂದಿಗೆ ಸೋಂಕು ದೃಢ

Update: 2020-08-05 14:07 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಆ.5: ಜಿಲ್ಲೆಯಲ್ಲಿ ಬುಧವಾರ ಸೋಂಕಿಗೆ ತುತ್ತಾಗಿದ್ದ 68 ವರ್ಷದ ವೃದ್ಧ ಮೃತಪಟ್ಟಿದ್ದು, 47 ಮಂದಿಗೆ ಕೊರೋನ ಸೋಂಕು ತಗುಲಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಇದೇ ವೇಳೆ 20 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬುಧವಾರ ಚಿಕ್ಕಮಗಳೂರು ತಾಲೂಕಿನಲ್ಲೇ ಹೆಚ್ಚು ಸೋಂಕುತರು ಪತ್ತೆಯಾಗಿದ್ದು, 25 ಮಂದಿಗೆ ಸೋಂಕು ತಗುಲಿದೆ. ಇನ್ನು ಕಡೂರು ತಾಲೂಕಿನಲ್ಲಿ ಇಬ್ಬರು,  ತರೀಕೆರೆ ತಾಲೂಕಿನಲ್ಲಿ 13, ಮೂಡಿಗೆರೆ ತಾಲೂಕಿನಲ್ಲಿ 4, ಶೃಂಗೇರಿ ತಾಲೂಕಿನಲ್ಲಿನಲ್ಲಿ 1 ಹಾಗೂ ಅಜ್ಜಂಪುರ ತಾಲೂಕಿನಲ್ಲಿ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 

ಬುಧವಾರ ವರದಿಯಾದ ಪಾಸಿಟಿವ್ ಪ್ರಕರಣಗಳ ಪೈಕಿ ಚಿಕ್ಕಮಗಳೂರು ನಗರದಲ್ಲೇ ಹೆಚ್ಚಿನ ಸೋಂಕಿತರು ಕಂಡು ಬಂದಿದ್ದು, ನಗರದ ಹೌಸಿಂಗ್ ಬೋರ್ಡ್, ನೆಹರು ನಗರ, ಕಲ್ಯಾಣ ನಗರ, ಮುಗಳವಳ್ಳಿ, ನರಿಗುಡ್ಡೆನಹಳ್ಳಿ, ವಿಜಯಪುರ, ಪಾಂಡುರಂಗ ದೇವಸ್ಥಾನ ಸಮೀಪ, ಫೆಕ್ಷನ್ ಮೊಹಲ್ಲಾ, ನಾಯ್ದು ಬೀದಿ, ಆಶ್ರಯ ಆಸ್ಪತ್ರೆ ಸಮೀಪದ ರಸ್ತೆ ಸೇರಿದಂತೆ ಓರ್ವ ಅರಣ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಕಡೂರು ತಾಲೂಕಿನ ಹಸಲಮ್ಮ ಬಡಾವಣೆ, ಎಸ್.ಬಿದರೆ, ತರೀಕೆರೆ ತಾಲೂಕಿನ ಯಲ್ಲಮ್ಮ ದೇವಸ್ಥಾನ ಸಮೀಪ ರಸ್ತೆ, ತರೀಕೆರೆ ಪಟ್ಟಣ, ತೋಪಣ್ಣ ಬೀದಿ, ಕೆಇಬಿ ಕಚೇರಿ ಸಮೀಪದ ರಸ್ತೆ, ನಾಗಪ್ಪ ಕಾಲನಿ, ಬೆಟ್ಟದಹಳ್ಳಿ ಮತ್ತು ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿಗೆ ಹೋಗಿ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. 

ಮೂಡಿಗೆರೆ ತಾಲೂಕಿನ ಕೆ.ಎಂ.ರಸ್ತೆ, ಮೂಡಿಗೆರೆ ಪಟ್ಟಣ, ಶೃಂಗೇರಿ ತಾಲ್ಲೂಕು ಹಾಗೂ ಅಜ್ಜಂಪುರ ತಾಲೂಕಿನ ಸಿದ್ಧರಾಮೇಶ್ವರ ರಸ್ತೆ, ಅಜ್ಜಂಪುರ ಪಟ್ಟಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಬುಧವಾರ ಪತ್ತೆಯಾದ ಸೋಂಕಿತರ ಪೈಕಿ ಕೆಲವರನ್ನು ಅವರವರ ಮನೆಗಳಲ್ಲಿ ಹೋಂ ಐಸೋಲೇಶನ್ ಮಾಡಿದ್ದು, ಮತ್ತೆ ಕೆಲವರನ್ನು ಜಿಲ್ಲೆಯಲ್ಲಿ ತೆರಯಲಾಗಿರುವ ಕೋವಿಡ್-19 ಕೇರ್ ಸೆಂಟರ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.  

ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯಕ್ಕೆ ಜಿಲ್ಲಾಡಳಿತ ತಂಡ ರಚಿಸಿದ್ದು, ಸೋಂಕಿತರು ಪತ್ತೆಯಾದ ಸುತ್ತಮುತ್ತಲ ಪ್ರದೇಶವನ್ನು ನಿರ್ಬಂಧಿತವಲಯವೆಂದು ಘೋಷಿಸಿರುವ ಜಿಲ್ಲಾಡಳಿತ ಈ ಪ್ರದೇಶಗಳ ನಿರ್ವಹಣೆಗೆ ಆಯಾ ತಾಲ್ಲೂಕು ತಹಶೀಲ್ದಾರ್ ನೇಮಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. 

ಬುಧವಾರ ಪತ್ತೆಯಾದ 47 ಮಂದಿ ಸೋಂಕಿತರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1243ಕ್ಕೆ ಏರಿಕೆಯಾಗಿದೆ. 671 ಪ್ರಕರಣಗಳು ಸಕ್ರಿಯವಾಗಿದ್ದು, ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಂದಿ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 527 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News