ಹೊಮ್ ಐಸೊಲೇಷನ್‍ನಲ್ಲಿರುವ ಸೋಂಕಿತರ ನೆರವಿಗೆ 24 ವಿಶೇಷ ತಂಡಗಳ ರಚನೆ: ಧಾರವಾಡ ಜಿಲ್ಲಾಧಿಕಾರಿ

Update: 2020-08-05 15:33 GMT

ಧಾರವಾಡ, ಆ.5: ಲಕ್ಷಣ ರಹಿತ ಕೊರೋನ ಸೋಂಕಿತರಿಗೆ ಹೋಮ್ ಐಸೋಲೇಷನ್ ಆಯ್ಕೆಗೆ ಅವಕಾಶವಿರುವುದರಿಂದ ಹೆಚ್ಚು ಜನ ಹೋಮ್ ಐಸೋಲೇಷನ್ ಆಗುತ್ತಿದ್ದು, ಅವರ ಮನೆಗೆ ಖುದ್ದು ಭೇಟಿ ನೀಡಿ ಆರೋಗ್ಯ ವಿಚಾರಿಸಲು ಮತ್ತು ಅಗತ್ಯ ಪರೀಕ್ಷೆ, ಆರೋಗ್ಯ ಸಲಹೆ ನೀಡಲು ವೈದ್ಯರ ನೇತೃತ್ವದಲ್ಲಿ 24 ವಿಶೇಷ ತಂಡಗಳನ್ನು ರಚಿಸಿ, ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೋನ ಸೋಂಕಿತರ ಶಿಫ್ಟಿಂಗ್ ತಂಡಗಳ ಮತ್ತು ಹೋಮ್ ಐಸೋಲೇಷನ್ ಮೇಲ್ವಿಚಾರಣೆ ತಂಡಗಳ ಸಭೆ ನಡೆಸಿ ಅವರು ಮಾತನಾಡಿದರು.

ಸೋಂಕಿತರ ಶಿಫ್ಟಿಂಗ್ ತಂಡ ಚೆನ್ನಾಗಿ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಹೊಮ್ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುವ ಸೋಂಕಿತರ ಸಂಖ್ಯೆ ಕಡಿಮೆ ಇತ್ತು. ಈಗ ಹೆಚ್ಚು ಜನ ಹೊಮ್ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚು ತಂಡಗಳ ಅಗತ್ಯವಿದೆ ಮತ್ತು ತಂಡಗಳು ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಸುಮಾರು 506 ಕ್ಕಿಂತ ಹೆಚ್ಚು ಲಕ್ಷಣ ರಹಿತ ಕೊರೋನ ಸೋಂಕಿತರು ಹೊಮ್ ಐಸೊಲೇಷನ್ ಆಗಿದ್ದಾರೆ. ಅವರ ಮನೆಗಳಿಗೆ ಭೇಟಿ ನೀಡಿ, ಹೊಮ್ ಐಸೊಲೇಷನ್ ನಿಯಮಗಳ ಪಾಲನೆ, ಆರೋಗ್ಯ ಸ್ಥಿರತೆ ಹಾಗೂ ಮುನ್ನೆಚರಿಕೆ ಕ್ರಮಗಳ ಕುರಿತು ಮಾಹಿತಿ ಮತ್ತು ಅವರ ಆರೋಗ್ಯ ಪರೀಕ್ಷೆಗಾಗಿ ಪ್ರತಿ ವೈದ್ಯರ ನೇತೃತ್ವದಲ್ಲಿ ಹುಬ್ಬಳ್ಳಿ ಹಾಗೂ ಇನ್ನಿತರ ತಾಲೂಕಿಗೆ 16 ಮತ್ತು ಧಾರವಾಡ, ಅಳ್ನಾವರ ತಾಲೂಕಿಗೆ 8 ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ತಂಡವು ಪ್ರತಿ ದಿನ ಕನಿಷ್ಠ 12 ರಿಂದ 15 ಹೊಮ್ ಐಸೊಲೇಷನ್ ಆಗಿರುವ ಸೋಂಕಿತರ ಮನೆಗೆ ಭೇಟಿ ನೀಡಿ, ವರದಿ ಮಾಡುವುದು ಕಡ್ಡಾಯವಾಗಿದೆ. ಹೊಮ್ ಐಸೊಲೇಷನ್ ಆದವರ ಮಾಹಿತಿಯನ್ನು ಸಂಗ್ರಹಿಸಿ, ಈ ತಂಡದೊಂದಿಗೆ ಸಂಪರ್ಕ ಮತ್ತು ಸಮನ್ವಯ ಸಾಧಿಸಲು ಭೂದಾಖಲೆಗಳ ಇಲಾಖೆ ಉಪನಿರ್ದೇಶಕಿ ನಜ್ಮಾ ಪೀರ್‍ಝಾದೆ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಝೀಝ್ ದೇಸಾಯಿ ಮತ್ತು ಸಮಾಜ ಕಲ್ಯಾಣ ಇಲಖೆ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ ಅವರ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೋಮ್ ಐಸೊಲೇಷನ್‍ನಲ್ಲಿರುವ ಸೋಂಕಿತರು ಯಾವುದೇ ಮಾಹಿತಿ, ಆರೋಗ್ಯ ಚಿಕಿತ್ಸೆ ಅಗತ್ಯವಿದ್ದಲ್ಲಿ ಹೊಮ್ ಐಸೊಲೇಷನ್ ತಂಡದ ನೋಡಲ್ ಅಧಿಕಾರಿ ಡಾ.ಸಂಪತ್ ಸಿಂಗ್ ರಂಗವಲ್ಲಿ ಅವರನ್ನು (ಮೊಬೈಲ್ ಸಂಖ್ಯೆ 9448746499) ಸಂಪರ್ಕಿಸಬೇಕು. ಯಾವ ವೈದ್ಯರ ತಂಡ ಯಾವ ಸೋಂಕಿತರ ಮನೆಗೆ ಭೇಟಿ ನೀಡಲಿದೆ ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ. ನೋಡಲ್ ಅಧಿಕಾರಿಯೂ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ತಂಡಗಳು ಹೊಮ್ ಐಸೊಲೇಷನ್ ಭೇಟಿ ನೀಡಿದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಅವರು ನಿರ್ದೇಶಿಸಿದರು.
ಕೊರೋನ ಜಾಗೃತಿಗಾಗಿ ವಿವಿಧ ಇಲಾಖೆಗಳಿಂದ ಬೀದಿ ನಾಟಕ, ಬ್ಯಾನರ್, ಹೆದ್ದಾರಿ ಫಲಕ, ಧ್ವನಿಮುದ್ರಿಕೆ ಸೇರಿದಂತೆ ವಿವಿಧ ಸಮೂಹ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಹಿರಿಯ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೇರ್, ಡಿಡಿಎಲ್‍ಆರ್ ನಜ್ಮಾ ಪೀರ್‍ಝಾದೆ, ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ, ಆರ್.ಸಿ.ಎಚ್.ಓ ಡಾ.ಎಸ್.ಎಂ.ಹೊನಕೇರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ತಹಶೀಲ್ದಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News