ಅಲೆಮಾರಿ ಸಮುದಾಯವರಿಗೆ 'ಅರಸು ವಸತಿ ಯೋಜನೆ'ಯಡಿ ಮನೆ ನಿರ್ಮಾಣ: ಸಚಿವ ವಿ.ಸೋಮಣ್ಣ

Update: 2020-08-05 16:32 GMT

ಬೆಂಗಳೂರು, ಆ. 5: ರಾಜ್ಯದಲ್ಲಿನ ಅಲೆಮಾರಿ ಸಮುದಾಯದವರಿಗೆ ದೇವರಾಜ ಅರಸು ವಸತಿ ಯೋಜನೆಯಡಿ 69 ಸಾವಿರ ಮನೆಗಳನ್ನು ನಿರ್ಮಿಸುವ ಮೂಲಕ ವಸತಿ ಇಲ್ಲದೆ ಇದ್ದ ಅಲೆಮಾರಿಗಳಿಗೆ ಆಶ್ರಯ ಕಲ್ಪಿಸಲು ಸರಕಾರ ಕ್ರಮ ವಹಿಸಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಅಲೆಮಾರಿ ಸಮುದಾಯವರಿಗೆ ವಸತಿ ಸೌಲಭ್ಯ ಕಲ್ಪಿಸುವ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿರುವ ಅಲೆಮಾರಿಗಳಿಗೆ ದೇವರಾಜ ಅರಸು ವಸತಿ ಯೋಜನೆಯಡಿ 69 ಸಾವಿರ ಮನೆಗಳನ್ನು ನಿರ್ಮಿಸಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

ಅಲೆಮಾರಿ ಸಮುದಾಯದ ಫಲಾನುಭವಿಗಳಿಗೆ ಇನ್ನೂ ಇಪ್ಪತ್ತೈದು ದಿನಗಳ ಒಳಗೆ ಆದೇಶ ಪತ್ರ ಕೊಡುವ ಕೆಲಸ ಮಾಡಲಾಗುವುದು. ಅಲ್ಲದೆ, 1.20 ಲಕ್ಷ ರೂಪಾಯಿ ಹಣವನ್ನು 4 ಕಂತಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದ ಅವರು, ರಾಜ್ಯದಲ್ಲಿ ಇನ್ನು ಮುಂದಿನ ಮೂರು ವರ್ಷಗಳಲ್ಲಿ ಯಾರೊಬ್ಬರೂ ಮನೆ ಇಲ್ಲದೆ ಇರಬಾರದು. ಆ ನಿಟ್ಟಿನಲ್ಲಿ ಸರಕಾರ ವಸತಿ ಸೌಲಭ್ಯ ಕಲ್ಪಿಸಲು ವಿಶೇಷ ಆಸ್ಥೆ ವಹಿಸಿದೆ ಎಂದರು.

ಹೊಸ ಯೋಜನೆ: ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಶಂಕುಸ್ಥಾಪನೆಯ ದಿನವೇ ವಸತಿ ಇಲಾಖೆಯಲ್ಲಿ ಹೊಸ ವ್ಯವಸ್ಥೆ ಪ್ರಾರಂಭ ಮಾಡಲು ಉದ್ದೇಶಿಸಲಾಗಿದ್ದು, ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಲಾಗುತ್ತಿದೆ ಎಂದ ಸೋಮಣ್ಣ, ವಸತಿ ಇಲಾಖೆ ಎಲ್ಲ ಯೋಜನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.

ಶೀಘ್ರ ಗುಣಮುಖರಾಗಲಿ: ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕೊರೋನ ಸೋಂಕು ದೃಢಪಟ್ಟಿದ್ದು ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರೂ ನಾಯಕರು ಶೀಘ್ರವೇ ಗುಣಮಖರಾಗಿ ರಾಜ್ಯದ ಜನರ ಸೇವೆಗೆ ಮರಳಲಿ ಎಂದು ಸಚಿವ ಸೋಮಣ್ಣ ಇದೇ ವೇಳೆ ಕೋರಿದರು.

`ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ದಿನವೇ ವಸತಿ ಇಲಾಖೆ ಅಲೆಮಾರಿ ಸಮುದಾಯಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಹೊಸ ಯೋಜನೆಗೆ ಚಾಲನೆ ನೀಡಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಅಲೆಮಾರಿ ಜನಾಂಗದವರಿಗೆ ನೆಲೆ ಒದಗಿಸಲು ಉದ್ದೇಶಿತ ಯೋಜನೆಯಡಿ ಒಟ್ಟು 69 ಸಾವಿರ ಮನೆ ನಿರ್ಮಿಸಲಾಗುವುದು'
-ವಿ.ಸೋಮಣ್ಣ ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News