ಕೊರೋನ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ ಎಂದ ಡೊನಾಲ್ಡ್ ಟ್ರಂಪ್!

Update: 2020-08-05 17:24 GMT

ವಾಶಿಂಗ್ಟನ್, ಆ. 5: ಜಗತ್ತಿನಾದ್ಯಂತ ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ ಬುಧವಾರ 7 ಲಕ್ಷವನ್ನು ದಾಟಿದೆ ಎಂದು ‘ರಾಯ್ಟರ್ಸ್’ ಸುದ್ದಿಸಂಸ್ಥೆ ಸಂಗ್ರಹಿಸಿದ ಅಂಕಿಅಂಶಗಳು ತಿಳಿಸಿವೆ. ಅಮೆರಿಕ, ಬ್ರೆಝಿಲ್, ಭಾರತ ಮತ್ತು ಮೆಕ್ಸಿಕೊ ದೇಶಗಳಲ್ಲಿ ಸಾವಿನ ಸಂಖ್ಯೆಯು ಅಗಾಧ ಪ್ರಮಾಣದಲ್ಲಿ ಏರುತ್ತಿದೆ.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪ್ರತಿ 24 ಗಂಟೆಗಳಲ್ಲಿ ಸರಾಸರಿ ಸುಮಾರು 5,900 ಮಂದಿ ಸಾವಿಗೀಡಾಗುತ್ತಿದ್ದಾರೆ ಎನ್ನುವುದು ಕಳೆದ ಎರಡು ವಾರಗಳ ‘ರಾಯ್ಟರ್ಸ್’ ಅಂಕಿಸಂಖ್ಯೆಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಇದರ ಪ್ರಕಾರ, ಪ್ರತಿ ಗಂಟೆಗೆ 247 ಮಂದಿ ಹಾಗೂ ಪ್ರತಿ 15 ಸೆಕೆಂಡ್‌ಗಳಿಗೆ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅದೇ ವೇಳೆ, ಕೊರೋನ ವೈರಸನ್ನು ಎಷ್ಟು ನಿಯಂತ್ರಣದಲ್ಲಿಡಬಹುದೋ ಅಷ್ಟು ನಿಯಂತ್ರಣದಲ್ಲಿ ಅದು ಅಮೆರಿಕದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ 1,55,000ಕ್ಕೂ ಅಧಿಕ ಮಂದಿ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ.

‘‘ಜನರು ಸಾಯುತ್ತಿದ್ದಾರೆ ಎನ್ನುವುದು ಸತ್ಯ’’ ಎಂದು ‘ಆ್ಯಕ್ಸಿಯೋಸ್’ ಸುದ್ದಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದಾರೆ. ‘‘ಅದು ಹೌದು, ಆದರೆ, ಅದರರ್ಥ ನಾವು ನಮ್ಮಿಂದ ಆಗುವ ಎಲ್ಲವನ್ನೂ ಮಾಡುತ್ತಿಲ್ಲ ಎಂದಲ್ಲ. ಅದನ್ನು ಎಷ್ಟು ನಿಯಂತ್ರಣದಲ್ಲಿಡಬಹುದೋ ಅಷ್ಟು ನಿಯಂತ್ರಣದಲ್ಲಿ ಅದು ಇದೆ. ಇದು ಭಯಾನಕ ಪ್ಲೇಗ್’’ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News