ಮಂಡ್ಯ: ಮೂವರು ಪಿಡಿಒಗಳಿಗೆ 61,796 ರೂ. ದಂಡ

Update: 2020-08-05 18:02 GMT

ಮಂಡ್ಯ, ಆ.5: ಬೀದಿದೀಪ ಖರೀದಿಯಲ್ಲಿ ಕರ್ತವ್ಯಲೋಪ ಹಾಗೂ ಹಣ ದುರುಪಯೋಗ ಮಾಡಿದ್ದ ಮೂವರು ಪಿಡಿಒಗಳಿಗೆ ದಂಡ ವಿಧಿಸಿ, ಇಬ್ಬರು ಪಿಡಿಒಗಳಿಗೆ ಒಂದು ವಾರ್ಷಿಕ ವೇತನ ಬಡ್ತಿ ತಡೆ ಹಿಡಿದು ಜಿಪಂ ಸಿಇಒ ಆದೇಶಿಸಿದ್ದಾರೆ.

ಮಂಡ್ಯ ತಾಲೂಕಿನ ಬೂದನೂರು ಗ್ರಾಪಂ ಕಚೇರಿಯಲ್ಲಿ 2016-17ನೇ ಸಾಲಿನಲ್ಲಿ ಬೀದಿದೀಪ ಖರೀದಿಸುವಾಗ ಹೆಚ್ಚುವರಿ ಪಾವತಿಸಿದ್ದರು ಎಂದು (50,138 ರೂ.)ಪಿಡಿಒ ವಿರುದ್ದ ಸದಸ್ಯರಾಗಿದ್ದ ಬಿ.ಕೆ.ಸತೀಶ್ ಎಂಬುವವರು ಜಮಾಬಂಧಿಯಲ್ಲಿ‌ ದೂರು ದಾಖಲಿಸಿದ್ದರು.

ದೂರಿನ ಮೇರೆಗೆ ಜಮಾಬಂಧಿ ಅಧಿಕಾರಿಯಾಗಿದ್ದ ಪಶುಪಾಲನಾ ಇಲಾಖೆಯ ಸಹಾಯಕ‌ ನಿರ್ದೇಶಕ ವಿವೇಕಾನಂದ, ಜಿಪಂ ಸಿಇಒ ಅವರಿಗೆ ಹೆಚ್ಚಿನ ತನಿಖೆಗೆ ಪತ್ರ ಬರೆದಿದ್ದರು.

ಹಲವು ವಿಚಾರಣೆ ಬಳಿಕ ಜಂಟಿ ಇಲಾಖಾ ವಿಚಾರಣೆ ನಡೆಸಿ  ಹೆಚ್ಚುವರಿ ಪಾವತಿ ಮೊತ್ತ 50,138 ರೂ. ಹಾಗೂ ಬಡ್ಡಿ 11,658 ರೂ. ಸೇರಿದಂತೆ 61,796 ರೂ.ಗಳನ್ನು ಪಾವತಿಸುವಂತೆ ಆದೇಶಿಸಿದ್ದಾರೆ.

ಬೂದನೂರು ಗ್ರಾಮ ಪಂಚಾಯತಿಯ ಆಗಿನ ಪಿಡಿಒಗಳಾದ ಸೌಭಾಗ್ಯಲಕ್ಷ್ಮಿ (ಹಾಲಿ ದುದ್ದ ಗ್ರಾಪಂ ಪಿಡಿಒ) ಅವರು 39,385 ರೂ, ಕಲಾ (ಹಾಲಿ ಹಲ್ಲೇಗೆರೆ ಪಿಡಿಒ) ಅವರು 4,190 ರೂ. ಪಾವತಿಸಲು ಸೂಚಿಸಲಾಗಿದೆ. ಅಲ್ಲದೆ ಇಬ್ಬರಿಗೂ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತರಹಿತವಾಗಿ ತಡೆ ಹಿಡಿದು ಆದೇಶಿಸಿದೆ.

ಅಲ್ಲದೆ ಆಗಿನ ಪ್ರಭಾರ ಪಿಡಿಒ‌ ಆಗಿದ್ದ ಕೆ.ಎಂ.ಶಿವಣ್ಣ ಎಂಬುವವರು ಸದ್ಯ ನಿವೃತ್ತರಾಗಿದ್ದು ಸಿಸಿಎ ನಿಯಮಗಳನ್ವಯ ವಿಚಾರಣೆಗೆ ಸರಕಾರದಿಂದ ಅನುಮತಿ‌ ಪಡೆದು 18,221 ರೂ. ಪಾವತಿಸಲು ಸೂಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬೂದನೂರು ಗ್ರಾಪಂ ನಿಕಟಪೂರ್ವ ಸದಸ್ಯ ಬಿ.ಕೆ.ಸತೀಶ್ ಅವರು, ಕೇವಲ ಒಂದು ವರ್ಷದ ಅವ್ಯವಹಾರವನ್ನು ತನಿಖೆಗೆ ಒಳಪಡಿಸಿದ್ದು, ಕಳೆದ 10 ವರ್ಷಗಳ ಖರೀದಿ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲೆಯ ಗ್ರಾಪಂಗಳಲ್ಲಿ ಖರೀದಿ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ. ಸಾರ್ವಜನಿಕರ ತೆರಿಗೆ ಹಣ ಉಳಿಸಲು ನಾನು ಮಾಡಿದ ಪ್ರಯತ್ನಕ್ಕೆ ಗೆಲುವು ಸಿಕ್ಕಿರುವುದು ಸಂತಸ ತಂದಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News