ಸಕಲೇಶಪುರ: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

Update: 2020-08-05 18:11 GMT

ಸಕಲೇಶಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, ಭಾರೀ ವೇಗವಾಗಿ ಬೀಸುತ್ತಿರುವ ಗಾಳಿ ಹಾಗೂ ಮಳೆಗೆ ಹಲವು ಮನೆಗಳ ಮೇಲ್ಚಾವಣಿಗಳೆ ಹಾರಿ ಹೋಗಿವೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಹಲಸುಲಿಗೆ ಗ್ರಾಮದಲ್ಲಿ ಐದು ಮರಗಳು, 5 ವಿದ್ಯುತ್ ಕಂಬಗಳು ಹಾಗೂ ಒಂದು ಟ್ರಾನ್ಸ್ ಫಾರ್ಮರ್ ರಸ್ತೆಗೆ ಉರುಳಿ ಬಿದ್ದಿವೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮರಗಳನ್ನು ತೆರವುಗೊಳಿಸಿದರು. ಚಂಪಕನಗರ ಬಡಾವಣೆಯ ಮಂಜುನಾಥ್ ಎಂಬವರ ಮನೆಯ ಮೇಲ್ಚಾವಣಿ ಶೀಟ್ ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಕೆಸಗಾನಹಳ್ಳಿ ಗ್ರಾಮದ ಲಿಂಗರಾಜು ಮನೆ ಮೇಲೆ ತೆಂಗಿನ ಮರ ಬಿದ್ದು ಮೇಲ್ಚಾವಣಿ ಜಖಂಗೊಂಡಿದೆ.

ಕುಡುಗರಹಳ್ಳಿ ಬಡಾವಣೆಯಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿವೆ. ಜಾನೇಕೆರೆ, ಅರೆಕೆರೆ ಗ್ರಾಮಗಳಲ್ಲಿ ವಣಗೂರು-ಜನ್ನಾಪುರ ರಾಜ್ಯ ಹೆದ್ದಾರಿ ಯಲ್ಲಿ ಹತ್ತಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಈ ಮಾರ್ಗದಲ್ಲಿ ಕೆಲು ಗಂಟೆಗಳ ಕಾಲ ‌ವಾಹನಗಳ ಸಂಚಾರ ಸ್ಥಗಿತ ಗೊಂಡಿತ್ತು. ಸಕಲೇಶಪುರ-ಅರೇಹಳ್ಳಿ ನಡುವಿನ ರಾಜ್ಯ ಹೆದ್ದಾರಿ ಯಲ್ಲಿಯೂ ಸಹ ಹಲವು ಮರಗಳು ರಸ್ತೆಗೆ ಉರುಳಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಎತ್ತಿನಹೊಳೆ ಸುರಂಗ ಮಾರ್ಗ ಹಾದುಹೋಗಿರುವ ಹೆಬ್ಬನಹಳ್ಳಿ ಗ್ರಾಮದಲ್ಲಿ ಲೋಕೇಶ್ ಎಂಬುವವರ ಮನೆ ಅಂಗಳದಲ್ಲಿ ಮಣ್ಣು ಕುಸಿತ ಉಂಟಾಗಿದ್ದು ಮನೆ ಅಪಾಯದಲ್ಲಿದೆ ಎಂದು ತಿಳುದು ಬಂದಿದೆ. ತಾಲ್ಲೂಕಿನ ಬಹುತೇಕ ಗದ್ದೆಗಳಲ್ಲಿ ನಾಟಿ ಮಾಡಿರುವ ಭತ್ತದ ಸಸಿ ಸಂಪೂರ್ಣ ಮಳೆ ನೀರಿನಿಂದ ಮುಳುಗಿದೆ. ಸಧ್ಯಕ್ಕೆ ರೈತರು ಕೃಷಿ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News