×
Ad

ಶಿವಮೊಗ್ಗ: ಭಾರೀ ಮಳೆ; ಅಪಾಯದ ಮಟ್ಟ ತಲುಪಿದ ನದಿಗಳು

Update: 2020-08-06 17:29 IST

ಶಿವಮೊಗ್ಗ: ಜಿಲ್ಲೆಯಲ್ಲಿ ವರ್ಷಧಾರೆ ಚುರುಕುಗೊಂಡಿದ್ದು, ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಜಿಲ್ಲೆಯ ಜೀವನದಿಗಳು ಅಪಾಯದ ಮಟ್ಟವನ್ನು ತಲುಪಿವೆ.

ಜಿಲ್ಲೆಯ  ತೀರ್ಥಹಳ್ಳಿ, ಆಗುಂಬೆ, ಹೊಸನಗರ, ಸಾಗರ ಭಾಗದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಕೆಲವು ಕಡೆ ಮರಗಳುಬಿದ್ದ ಪರಿಣಾಮ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ವಿದ್ಯುತ್ ಸಂಪರ್ಕವೂ ಕೆಲವೆಡೆ ಸ್ಥಗಿತಗೊಂಡಿದೆ.

ಜಿಲ್ಲೆಯ ಜೀವನದಿಗಳಾದ ತುಂಗಾ, ಭದ್ರೆ, ಶರಾವತಿ, ಕುಮದ್ವತಿ, ವರದಾ ನದಿಗಳು ಈಗಾಗಲೇ ಮೈದುಂಬಿ ಹರಿಯುತ್ತಿದ್ದು, ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿ 12 ಗೇಟ್‌ಗಳ ಮೂಲಕ 65 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.  ಇದರಿಂದಾಗಿ ನಗರದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಮಂಟಪ ಸಂಪೂರ್ಣ ಮುಳುಗಿದೆ.

ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಹಲವು ಭಾಗದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಅನೇಕ ಹೊಲ, ಗದ್ದೆಗಳಿಗೆ ನೀರು ನುಗ್ಗಿದೆ.  ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಂಚಾರ ವ್ಯವಸ್ಥೆಗೂ ಅಡ್ಡಿಯುಂಟಾಗಿದ್ದು, ದೈನಂದಿನ ಜೀವನಕ್ಕೆ ತೊಂದರೆಯುಂಟಾಗಿದೆ.

ಮೈದುಂಬಿದ ಜೋಗ: ವಿಶ್ವವಿಖ್ಯಾತ ಜೋಗ ಜಲಪಾತ ಈ ಬಾರಿಯ ಮುಂಗಾರು ಹಂಗಾಮಿ ನಲ್ಲಿ ಮೈದುಂಬಿದ್ದು,  ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರ ಕೊರತೆ ಇದೆ.  ಶರಾವತಿ ಭಾಗದಲ್ಲಿ  ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಜೋಗಜಲಪಾತ ಮತ್ತಷ್ಟು ವೈಭವವಗೊಂಡಿದೆ.
ಶಿವಮೊಗ್ಗ ನಗರ ಸೋಮಿನಕೊಪ್ಪದಲ್ಲಿ ಬುಧವಾರ ಸಂಜೆ ಮಳೆಯಿಂದಾಗಿ ಸರ್ಕಾರಿ ಶಾಲಾ ಕಟ್ಟಡದ ಗೋಡೆಯಿಂದು ಕುಸಿದಿದೆ. ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಯಾವುದೇ ಅನಾಹುತ ಉಂಟಾಗಿಲ್ಲ. ತ್ರಿಮೂರ್ತಿ ನಗರದಲ್ಲಿ ಮನೆಯ ಗೋಡೆಯೊಂದು ಕುಸಿದಿದೆ ಎನ್ನಲಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಶಿಥಾಲವಸ್ಥೆಯಲ್ಲಿರುವ ಹಲವು ಮನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಬಾರಿಯೂ  ಇದೇ ಅವಧಿಯಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ನಷ್ಟ ಉಂಟಾಗಿತ್ತು. ಇದರಿಂದಾಗಿ ಈ ಭಾಗದ ಜನತೆ ಆತಂಕಕ್ಕೆ ಒಳಗಾಗಿದ್ದು,  ಈ ವರ್ಷವೂ ಸಹ ಪ್ರವಾಹ ಸಂಭವಿಸಬಹುದೇ ಎಂಬ ನಿರೀಕ್ಷೆಯಲ್ಲಿ ಜೀವನ ನಡೆಸುತ್ತಿದ್ದಾರೆ.

ಈಗಾಗಲೇ ಜಿಲ್ಲಾಡಳಿತ  ಜಿಲ್ಲೆಯನ್ನು ರೆಡ್ ಅಲರ್ಟ್ ಪ್ರದೇಶವೆಂದು ಘೋಷಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ  ಸೂಚನೆ ನೀಡಲಾಗಿದೆ.  ಅಲ್ಲದೆ, ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ  ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಕಳೆದ ಬಾರಿ ಆಗಸ್ಟ್ ತಿಂಗಳಿನಲ್ಲಿಯೇ ಪ್ರವಾಹ ಪರಿಸ್ಥಿತಿ ಉಂಟಾಗಿ ಅನೇಕ ಬಡಾವಣೆಯ ಮನೆಗಳು ಜಲಾವೃತಗೊಂಡಿದ್ದವು. ಗೋಶಾಲೆಯೊಂದರ 15ಕ್ಕೂ ಹೆಚ್ಚು ಹಸುಗಳು ಪ್ರವಾಹದಿಂದಾಗಿ ಅಸು ನೀಗಿದ್ದವು. ಎಷ್ಟೋ ಮನೆಗಳು ನೆಲಕ್ಕುರುಳಿದ್ದವು. ಕೋಟ್ಯಾಂತರ ರೂ. ಆಸ್ತಿ ಪಾಸ್ತಿ ನಷ್ಟ ಉಂಟಾಗಿತ್ತು.

ಹಲವೆಡೆ ಗಂಜಿ ಕೇಂದ್ರಗಳನ್ನು   ತೆರೆಯುವ ಮೂಲಕ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿತ್ತು. ರಾತ್ರೋ ರಾತ್ರಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಪಾಲಿಕೆ ಆಯುಕ್ತರು, ಜಿಪಂ ಸಿಇಓ, ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತಹಶೀಲ್ದಾರ ಸೇರಿದಂತೆ ಹಲವು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ನೆರೆಯಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತ ಸ್ಥಳಗಳಿಗೆ ತರುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ಬಾರಿ ನಗರದ ಹೃದಯಭಾಗದಲ್ಲಿ ಹಾದು ಹೋಗಿರುವ ತುಂಗಾ ನಾಲೆ  ಉಕ್ಕಿ ಹರಿದ ಪರಿಣಾಮ, ರಾಜೇಂದ್ರ ನಗರ, ಅಶ್ವಥ್‌ನಗರ, ಎಲ್‌ಬಿಎಸ್ ನಗರ, ವೆಂಕಟೇಶ್ ನಗರ ಸೇರಿದಂತೆ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸಮರೋಪಾದಿಯಲ್ಲಿ  ಸಂಕಷ್ಟಕ್ಕೆ ಸಿಲುಕಿದವರನ್ನು  ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ  ಕಂದಾಯ ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸಿದ್ದು, ಈಗಾಗಲೇ ಹಲವು ಬಾರಿ ಸಭೆಗಳನ್ನು ಕೂಡಾ ನಡೆಸಿದೆ.

ಅಗ್ನಿಶಾಮಕ ದಳ, ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ, ಮೆಸ್ಕಾಂ, ಅರಣ್ಯ ಇಲಾಖೆ, ನೀರಾವರಿ ಇಲಾಖೆ, ಸೇರಿದಂತೆ ಹಲವು ಇಲಾಖಾಧಿಕಾರಿಗಳ ಸಭೆ ನಡೆಸಿ, ನೆರೆಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊದಿಗೆ ಕೈಜೋಡಿಸಬೇಕೆಂಬ ಸೂಚನೆ ನೀಡಿದೆ.

ಈಗಾಗಲೇ ಜಿಲ್ಲೆಯನ್ನು ರೆಡ್ ಅಲರ್ಟ್ ಎಂದು ಘೋಷಿಸಲಾಗಿದ್ದು,  ನದಿ, ಹಳ್ಳ, ಕೊಳ್ಳ, ಕೆರೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಯುವವವರೆಗೆ ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಮೀನು ಹಿಡಿಯುವ ಕಾರ್ಯಕ್ಕೆ ಮೀನುಗಾರರು  ತೆರಳಬಾರದೆಂದು ಮೀನು ಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ.

ಇಂದಿನವರೆಗೆ ತುಂಗಾ ಜಲಾಶಯಕ್ಕೆ 62000 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಿಂದ 65000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 80000 ಕ್ಯೂಸೆಕ್‌ವರೆಗೆ ನೀರನ್ನು ಹೊರಬಿಡಬಹುದಾಗಿದೆ.
 

ಕಳೆದ ಬಾರಿ ಉಂಟಾದ ಅಪಾಯದ ಮಟ್ಟ ಈ ಬಾರಿ ಆಗದೇ ಇರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

-ಹರೀಶ್, ಎಇಇ, ತುಂಗಾ ಜಲಾಶಯ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News