ಖಾಸಗಿ ಬಸ್‍ಗಳ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ: ಸಾರಿಗೆ ಇಲಾಖೆ ಆದೇಶ

Update: 2020-08-06 15:20 GMT

ಬೆಂಗಳೂರು, ಆ.6: ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿ ಬಸ್‍ಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. 

ಮಹಾನಗರ ಪಾಲಿಕೆಗಳ ವ್ಯಾಪ್ತಿಗೆ ಒಳಪಡುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಮೊದಲ 2 ಕಿ.ಮೀ.,ಗೆ(ಸ್ಟೇಜ್-1) 8 ರೂ., ಎರಡನೆ ಹಂತಕ್ಕೆ 5.75 ರೂ., ಮತ್ತು ನಂತರದ ಹಂತಗಳಿಗೆ 3.50 ರೂ., ದರ ನಿಗದಿ ಮಾಡಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ಗಂಟೆಯವರೆಗೆ ಒಂದೂವರೆ ಪಟ್ಟು ದರ ನಿಗದಿಪಡಿಸಲಾಗಿದೆ.  

ಇತರ ಮಾರ್ಗಗಳಲ್ಲಿ ಸಾಮಾನ್ಯ ಸೇವೆ ಬಸ್‍ಗಳ ಕನಿಷ್ಠ ಪ್ರಯಾಣ ದರ ಮೊದಲ ಹಂತಕ್ಕೆ 6.5 ಕಿ.ಮೀ., 9.50 ರೂ., ನಂತರದ ಪ್ರತಿ ಕಿ.ಮೀ.ಗೆ 1 ದರ ನಿಗದಿ ಮಾಡಲಾಗಿದೆ. ಸೂಪರ್ ಡಿಲಕ್ಸ್(ಕುಷನ್ ಆಸನ ಮತ್ತು ಹೆಡ್‍ರೆಸ್ಟ್ ಇರುವ) ಬಸ್‍ಗಳಿಗೆ ಮೊದಲ ಹಂತಕ್ಕೆ ಕನಿಷ್ಠ ಪ್ರಯಾಣ ದರ 13 ರೂ., ಹೈಟೆಕ್ ಬಸ್‍ಗಳ(ಸುಖಾಸೀನ) ಮೊದಲ ಹಂತದ ಪ್ರಯಾಣದ ದರ 14 ರೂ., ಹಾಗೂ ನಂತರದ ಪ್ರತಿ ಕಿ.ಮೀ.ಗೆ 1.60 ರೂ. ನಿಗದಿ ಮಾಡಲಾಗಿದೆ. 

ವಾರಾಂತ್ಯ ಮತ್ತು ಹಬ್ಬದ ಸಂದರ್ಭಗಳಲ್ಲಿ ನಿಗದಿಪಡಿಸಿ ಆದೇಶಿಸಿದ ದರಕ್ಕಿಂತ 2 ಪಟ್ಟು ದರ ವಿಧಿಸಲು ಅವಕಾಶ ನೀಡಲಾಗಿದೆ. ಖಾಸಗಿ ಬಸ್ ಆಪರೇಟರ್‍ಗಳು ಮತ್ತು ರಾಜ್ಯ ಸಾರಿಗೆ ನಿಗಮಗಳ ಅಂತರ ನಗರ ಹವಾನಿಯಂತ್ರಿತ ಬಸ್‍ಗಳ ಪ್ರಯಾಣ ದರವನ್ನು ಬೇಡಿಕೆ ಆಧರಿಸಿ ನಿಗದಿಪಡಿಸುವುದನ್ನು ಅವರ ವಿವೇಚನೆಗೆ ಬಿಡಲಾಗಿದೆ. ಟೋಲ್ ಶುಲ್ಕವನ್ನೂ ಪ್ರಯಾಣಿಕರಿಂದಲೇ ಪಡೆಯಲು ಅವಕಾಶ ನೀಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಸಂಚರಿಸುವ ರಾಜ್ಯ ಸಾರಿಗೆ ನಿಗಮಗಳ ಬಸ್‍ಗಳ ಪ್ರಯಾಣ ದರ ನಿಗದಿ ಮಾಡುವುದನ್ನು ನಿಗಮಗಳ ವಿವೇಚನೆಗೆ ಬಿಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News