ಕೋವಿಡ್19: ರಾಜ್ಯದಲ್ಲಿ ಗುಣಮುಖರ ಪ್ರಮಾಣ ಒಂದೇ ವಾರದಲ್ಲಿ ಶೇ.11 ರಷ್ಟು ಹೆಚ್ಚಳ; ಸಚಿವ ಡಾ.ಕೆ.ಸುಧಾಕರ್

Update: 2020-08-06 16:52 GMT

ಬೆಂಗಳೂರು, ಆ. 6: ಕೊರೋನ ಸೋಂಕಿಗೊಳಗಾಗಿ ಗುಣಮುಖರಾದವರ ಪ್ರಮಾಣವು ಒಂದೇ ವಾರದಲ್ಲಿ ರಾಜ್ಯದಲ್ಲಿ ಶೇ.50.72 ಮತ್ತು ಬೆಂಗಳೂರಿನಲ್ಲಿ ಶೇ.50.34 ಕ್ಕೆ ತಲುಪಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಗುರುವಾರ ನಡೆದ ಆನ್‍ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.30 ರಂದು ರಾಜ್ಯದ ಗುಣಮುಖರ ಪ್ರಮಾಣ ಶೇ.39.36 ಮತ್ತು ಬೆಂಗಳೂರಿನಲ್ಲಿ ಶೇ.29.51 ರಷ್ಟಿತ್ತು. ಒಂದೇ ವಾರದಲ್ಲಿ ರಾಜ್ಯದಲ್ಲಿ ಶೇ.11.37 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.20.75 ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು.

ಲಾಕ್ ಡೌನ್ ತೆರವಾದ ನಂತರ ಬೇರೆ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಜುಲೈನಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು ಎಂದು ತಿಳಿಸಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮರಣ ಪ್ರಮಾಣ ಕಡಿಮೆ ಇದೆ. ಕರ್ನಾಟಕದಲ್ಲಿ ಕೊರೋನ ಸಾವಿನ ಪ್ರಮಾಣ ಪ್ರತಿ 10 ಲಕ್ಷಕ್ಕೆ 42 ಇದೆ. ನವದೆಹಲಿಯಲ್ಲಿ 204, ಮಹಾರಾಷ್ಟ್ರದಲ್ಲಿ 134, ತಮಿಳುನಾಡಿನಲ್ಲಿ 58, ಪಾಂಡಿಚೆರಿಯಲ್ಲಿ 43 ಮರಣ ಪ್ರಮಾಣ ಇದೆ. ಮುಂಬೈ ನಲ್ಲಿ ಪ್ರತಿ 10 ಲಕ್ಷಕ್ಕೆ 529, ಚೆನ್ನೈ ನಲ್ಲಿ 313, ಪುಣೆಯಲ್ಲಿ 258, ಅಹ್ಮದಾಬಾದ್ ನಲ್ಲಿ 224, ಕೋಲ್ಕತ್ತದಲ್ಲಿ 191 ಮರಣ ಪ್ರಮಾಣ ಇದೆ. ಆದರೆ ಬೆಂಗಳೂರಿನಲ್ಲಿ 121 ಮರಣ ಪ್ರಮಾಣ ಇದೆ ಎಂದು ವಿವರಿಸಿದರು.

ಆನ್‍ಲೈನ್ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News