ವಿದ್ಯಾಗಮ ಕಾರ್ಯಕ್ರಮಕ್ಕೆ ಆನ್‍ಲೈನ್ ಅವಕಾಶ ಕಲ್ಪಿಸಿ: ಬಸವರಾಜ ಗುರಿಕಾರ

Update: 2020-08-06 16:44 GMT

ಬೆಂಗಳೂರು, ಆ.6: ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗಾಗಿ ಸರಕಾರ ಘೋಷಿಸಿರುವ ವಿದ್ಯಾಗಮ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ನಡೆಯುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಒತ್ತಾಯಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆಂದು ಸರಕಾರ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಶಿಕ್ಷಕರು ಮಕ್ಕಳು ವಾಸಿಸುವ ಪ್ರದೇಶಕ್ಕೆ ಹೋಗಿ ಪಾಠ ಮಾಡುವಂತೆ ಆದೇಶಿಸಲಾಗಿದೆ. ಆದರೆ, ಕೋವಿಡ್-19 ಆತಂಕದ ಸಂದರ್ಭದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ಪಾಠ ಮಾಡುವುದು ಸಮಯೋಚಿತವಾಗಲಾರದು.

ಹತ್ತಾರು ಕಿಮೀ ಪ್ರಯಾಣ ಮಾಡಿ ಶಿಕ್ಷಕರು ವಿದ್ಯಾರ್ಥಿಗಳು ವಾಸಿಸುವ ಪ್ರದೇಶಕ್ಕೆ ಹೋಗುವುದರಿಂದ ಕೋವಿಡ್ ಸೋಂಕಿಗೆ ಸಿಲುಕಬಹುದು. ಹಾಗೂ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರಿಂದ ಸಹಕಾರ ಸಿಗದೆ ಹೋಗಬಹುದು. ಹತ್ತಾರು ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿ ಪಾಠ ಮಾಡಲು ಸ್ಥಳಾವಕಾಶ ನೀಡಲು ಸ್ಥಳೀಯರು ಹಿಂದೇಟು ಹಾಕಬಹುದು.

ಈ ಹಿನ್ನೆಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಹಾಗೂ ಆಯಾ ಪ್ರದೇಶದ ನೆರೆ ಹೊರೆ ಪ್ರದೇಶದ ಯುವಜನತೆಯಿಂದ ಮನೆ ಪಾಠ ಮಾಡುವಂತೆ ಸೂಚಿಸಬೇಕು. ಇದಕ್ಕೆ ಅಗತ್ಯವಾದ ಮಾರ್ಗದರ್ಶನವನ್ನು ಶಿಕ್ಷಕರು ಆನ್‍ಲೈನ್ ಮೂಲಕ ನೀಡುತ್ತಾರೆ. ಇವರ ಜತೆಗೆ ಆಯಾ ಪ್ರದೇಶದಲ್ಲಿ ವಾಸಿಸುವ ನಿವೃತ್ತ ಶಿಕ್ಷಕರನ್ನು ನಿಯೋಜಿಸಿದರೆ ಸೂಕ್ತವಾಗುತ್ತದೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಶಿಕ್ಷಕರನ್ನು ಮನೆಯಿಂದಲೇ ಕಾರ್ಯನಿರ್ವಹಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News