ನಿಯಮದಂತೆ ಮೆಡಿಕಲ್ ಸೀಟ್ ಹಂಚಿಕೆ: ಡಿಸಿಎಂ ಅಶ್ವತ್ಥ್ ನಾರಾಯಣ್

Update: 2020-08-06 17:00 GMT

ಬೆಂಗಳೂರು, ಆ.6: ಮೆಡಿಕಲ್ ಸೀಟ್ ಹಂಚಿಕೆಗೆ ನಡೆಸಲಾಗುವ ನೀಟ್ ಪರೀಕ್ಷೆ ಆಲ್ ಇಂಡಿಯಾ ಮಟ್ಟದಲ್ಲಿ ನಡೆಯಲಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ ಎಂದು ಉಪಮುಖ್ಯಮಂತ್ರಿ  ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊರೋನ ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ ಹಾಗೂ ಕೊರೀನ ಪಿ.ಎಚ್.ಸಿ ಆ್ಯಪ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜ್ಯದ ಯಾವುದೇ ಕಾಲೇಜುಗಳು ಸರಕಾರದ ಕಣ್ಣು ತಪ್ಪಿಸಿ ಮೆಡಿಕಲ್ ಸೀಟ್ ನೀಡಲು ಸಾಧ್ಯವಿಲ್ಲ. ನಿಯಮದ ಪ್ರಕಾರವೇ ಸೀಟು ಹಂಚಿಕೆ ನಡೆಯಲಿದೆ ಎಂದು ಹೇಳಿದರು.

ರಾಜ್ಯದೆಲ್ಲೆಡೆ ಭಾರಿ ಮಳೆಯಾಗುತ್ತಿದ್ದು, ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಹಾಗಾಗಿ ಮಳೆ ಅನಾಹುತ ತಡೆಗಟ್ಟುವ ಜವಾಬ್ದಾರಿಯನ್ನು ಅಧಿಕಾರಿಗಳು ಹಾಗೂ ಸಚಿವರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕನ್ನು ಹತೋಟಿಗೆ ತರಲು ಬಿಬಿಎಂಪಿ ಹರಸಾಹಸ ಪಡುತ್ತಿದೆ. ಕೊರೋನ ಸೋಂಕಿಗೆ ಗುರಿಯಾದವರಿಗೆ ಉತ್ತಮ ಸೌಲಭ್ಯ ನೀಡುವ ಉದ್ದೇಶದಿಂದ ಕೊರೋನ ನಿರ್ವಹಣಾ ವ್ಯವಸ್ಥೆ ಹಾಗೂ ಕೊರೋನ ಪಿ.ಎಚ್.ಸಿ ಆ್ಯಪ್ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡದ ಹಿನ್ನೆಲೆ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇಂತವರಿಗೆ ಉತ್ತಮ ಚಿಕಿತ್ಸೆ ನೀಡುವುದು ಸರಕಾರದ ಕೆಲಸ. ಈ ನಿಟ್ಟಿನಲ್ಲಿ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಮೇಯರ್ ಗೌತಮ್ ಕುಮಾರ್, ವಿಶೇಷ ಆಯುಕ್ತ ರಂದೀಪ್ ಉಪಸ್ಥಿತರಿದ್ದರು.

ಆ.20ರೊಳಗೆ ಸಿಇಟಿ ಫಲಿತಾಂಶ
ಆ.20ರೊಳಗೆ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಆ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News