ಎಐಡಿಎಸ್‍ಒನಿಂದ ಆ.7ರಂದು ರಾಜ್ಯಾದ್ಯಂತ ಪ್ರತಿಭಟನೆ

Update: 2020-08-06 17:09 GMT

ಬೆಂಗಳೂರು, ಆ.6: ಕೇಂದ್ರ ಸರಕಾರ ಏಕಪಕ್ಷೀಯವಾಗಿ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಎಐಡಿಎಸ್‍ಒನಿಂದ ಆ. 7ರಂದು ರಾಜ್ಯಾಧ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‍ಒನ ರಾಜ್ಯಾಧ್ಯಕ್ಷೆ ಅಶ್ವನಿ, ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ಎಬಿವಿಪಿಯನ್ನು ಹೊರತುಪಡಿಸಿ ಉಳಿದ ಎಲ್ಲ ವಿದ್ಯಾರ್ಥಿ ಸಂಘಟನೆಗಳನ್ನು ನಿರ್ಲಕ್ಷ್ಯ ಮಾಡಿದೆ. ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಅನುಸರಿಸದೆ ಏಕಪಕ್ಷೀಯವಾಗಿ ಜಾರಿ ಮಾಡಿದೆ.

ದೇಶದಲ್ಲಿ ಎಲ್ಲರಿಗೂ ಶಿಕ್ಷಣವನ್ನು ತಲುಪಿಸಲು ಶ್ರಮಿಸಿರುವ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ ಅಂತವರ ಹೆಸರುಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ಕೈಬಿಡಲಾಗಿದೆ. ಹಾಗೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಕ್ರಾಂತಿಕಾರಿ ಭಗತ್‍ಸಿಂಗ್ ಮತ್ತು ಚಂದ್ರಶೇಖರ್ ಆಝಾದ್‍ರವರ ಹೆಸರುಗಳನ್ನು ಕೈಬಿಡಲಾಗಿದೆ. ನಿರುದ್ಯೋಗ ನಿವಾರಣೆಯ ಹೆಸರಿನಲ್ಲಿ ವೃತ್ತಿಶಿಕ್ಷಣವನ್ನು ಪ್ರೌಢ ಶಿಕ್ಷಣದಿಂದಲೇ ಜಾರಿಗೊಳಿಸಲು ಹೇಳುತ್ತಿದೆ. ಆ ಮೂಲಕ ದಲಿತರು, ಹಿಂದುಳಿದ ಸಮುದಾಯದ ಮಕ್ಕಳ ಜ್ಞಾನದ ವಿಸ್ತರಣೆಗೆ ಕೊನೆ ಹಾಡಿ ಕೇವಲ ಗುಮಾಸ್ತರು ಮತ್ತು ಖಾಸಗಿ ಕಂಪನಿಗಳಿಗೆ ದುಡಿಯಲು ಕೌಶಲ್ಯಯುಕ್ತ ಮಾನವ ಯಂತ್ರಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಶಿಕ್ಷಣದ ಮೂಲಕ ಮಾನವನ ಚಾರಿತ್ರ್ಯ ನಿರ್ಮಾಣದ ಪ್ರಕ್ರಿಯೆ ಎಂಬ ಆಶಯವನ್ನು ಸಂಪೂರ್ಣವಾಗಿ ನಾಶಗೊಳಿಸಿ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಮತ್ತು ಶಿಕ್ಷಣದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಕೇಂದ್ರದ ಈ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರೂ ಒಳಗೊಂಡಂತೆ ದೇಶದ ಎಲ್ಲ ಶಿಕ್ಷಣ ಪರ ಮನಸ್ಸುಗಳು ವಿರೋಧಿಸಬೇಕಾಗಿದೆ ಎಂದು ಎಐಡಿಎಸ್‍ಒ ಪ್ರಕಟನೆಯಲ್ಲಿ ಮನವಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News