ಎಮ್ಮೆಮಾಡಿನಲ್ಲಿ ಮರಬಿದ್ದು ಮನೆಗೆ ಹಾನಿ: ವಿಶೇಷ ಪ್ರಕರಣವೆಂದು ಪರಿಗಣಿಸಲು ಡಿಸಿಸಿ ಒತ್ತಾಯ

Update: 2020-08-06 18:50 GMT

ಪೊನ್ನಂಪೇಟೆ, ಆ.6: ನಿರಂತರವಾಗಿ ಸುರಿಯುತ್ತಿದ್ದ ಮಳೆ ಮತ್ತು ವೇಗವಾಗಿ ಬೀಸುತ್ತಿದ್ದ ಗಾಳಿಯ ಪರಿಣಾಮ ಭಾರೀ ಗಾತ್ರದ ಮರ ಬಿದ್ದು ವಾಸದ ಮನೆವೊಂದು ಸಂಪೂರ್ಣವಾಗಿ ನಾಶವಾದ ಘಟನೆ ಎಮ್ಮೆಮಾಡು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಅದೃಷ್ಟವಶಾತ್ ಮನೆಯಲ್ಲಿದ್ದವರು ಚಿಕ್ಕಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಗಾತ್ರದ ಮರ ಮನೆಯ ಮಧ್ಯಭಾಗಕ್ಕೆ ಬಿದ್ದರೂ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಎಮ್ಮೆಮಾಡು ಗ್ರಾಮದ ಪಡಿಯಾನಿಯ ಅರೆಯಂಡ ಅಬ್ದುಲ್ ರಹ್ಮಾನ್ ಎಂಬವರಿಗೆ ಸೇರಿದ್ದ ವಾಸದ ಮನೆ ಇದೀಗ ಸಂಪೂರ್ಣವಾಗಿ ನೆಲಕಚ್ಚಿದ್ದು, ಇಡೀ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ. ಈ ಭಾಗದಲ್ಲಿ ನಿರಂತರವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಮನೆಯ ಹಿಂಭಾಗದಲ್ಲಿದ್ದ ಭಾರೀ ಗಾತ್ರದ ಮರವೊಂದು ರಾತ್ರಿ 7:30ರ ಸಮಯದಲ್ಲಿ ಏಕಾಏಕಿ ಮನೆಯ ಮೇಲೆ ಬಿದ್ದಿದೆ. ಈ ವೇಳೆ ರಹ್ಮಾನ್ ಅವರ ಪತ್ನಿ ಸಫಿಯಾ ಅವರ ಕೈಗೆ ಪೆಟ್ಟಾಗಿದೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಗ್ರಾಮಸ್ಥರು, ಸಂತ್ರಸ್ತ ಕುಟುಂಬವನ್ನು ಪಕ್ಕದ ಮನೆಗೆ ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಬೇರೆಡೆಗೆ ಸಾಗಿಸಿ ಸಹಕರಿಸಿದರು ಎಂದು ತಿಳಿದು ಬಂದಿದೆ.

ನಂತರ ರಾತ್ರಿ ಇಡೀ ಬಿರುಸಿನ ಮಳೆ ಮುಂದುವರಿದ ಕಾರಣ ಮನೆಯ ಮೇಲಿನ ಭಾಗಕ್ಕೆ ನೀರು ನುಗ್ಗಿ ಮನೆಯ ಗೋಡೆಗಳಲ್ಲಿ ಕುಸಿದುಬಿದ್ದಿದೆ. ಇದರಿಂದ ಗುರುವಾರ ಬೆಳಗ್ಗಿನ ಸಮಯದಲ್ಲಿ ಮನೆಯ ಗೋಡೆಗಳೆಲ್ಲಾ ಬಹುತೇಕ ಕುಸಿದು ಮಣ್ಣು ಪಾಲಾಗಿದೆ.

ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ)ಯ ಅಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್ ಗುರುವಾರ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸದ ಮನೆಯೊಂದು ಸಂಪೂರ್ಣ ವಾಗಿ ನಾಶಗೊಂಡು ವಾಸಕ್ಕೆ ಅಯೋಗ್ಯವಾಗಿರುವ ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಲಾಗಿದೆ. ಪ್ರಕೃತಿ ವಿಕೋಪದಡಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪೂರ್ಣ ಪ್ರಮಾಣದ ಪರಿಹಾರ ಧನ ಬಿುಗಡೆಗೊಳಿಸಬೇಕು. ಇದೀಗ ಮನೆ ಕಳೆದುಕೊಂಡಿರುವ ಬಡಕುಟುಂಬ ಅತಂತ್ರ ಸ್ಥಿತಿಯಲ್ಲಿದ್ದು, ಅವರಿಗೆ ಬದಲಿ ಮನೆ ನಿರ್ಮಾಣವಾಗುವವರೆಗೆ ಪ್ರತಿ ತಿಂಗಳು ಜಿಲ್ಲಾಡಳಿತ ಸಹಾಯಧನ ನೀಡಬೇಕು. ಅಲ್ಲದೆ ಕೂಡಲೇ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ರಹ್ಮಾನ್ (ಬಾಪು) ಮಾತನಾಡಿ, ಪ್ರಕೃತಿ ವಿಕೋಪದಡಿ ಸಂತ್ರಸ್ತರಾಗುವ ಬಡವರ್ಗದ ಅತಂತ್ರ ಸ್ಥಿತಿಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಅಬ್ದುಲ್ ರಹ್ಮಾನ್ ಅವರ ಮನೆ ಪೂರ್ಣ ವಾಗಿ ನಾಶಗೊಂಡಿದ್ದರಿಂದ ಕೂಡಲೇ ಜಿಲ್ಲಾಡಳಿತ ಸಂತ್ರಸ್ತ ಕುಟುಂಬಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಎಂ.ಎ.ಉಸ್ಮಾನ್, ಕೆ.ಎ.ಇಸ್ಮಾಯೀಲ್, ಪಿ.ಎಂ.ಹಂಝ, ಎನ್.ಎಂ.ಅಬ್ದುಲ್ ಅಝೀಝ್, ಝುಬೈರ್ ಕಡಂಗ, ಆಲೀರ ಎಂ. ರಶೀದ್, ಎಮ್ಮೆಮಾಡು ಗ್ರಾಪಂ ಸದಸ್ಯರಾದ ಅರೆಯಂಡ ಹಂಸು, ವೀರಾಜಪೇಟೆ ಪಪಂ ಸದಸ್ಯರಾದ ಡಿ.ಪಿ.ರಾಜೇಶ್ ಪದ್ಮನಾಭ, ಮುಹಮ್ಮದ್ ರಾಫಿ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News