ಆಸ್ತಿಯ ದೃಢೀಕರಣಕ್ಕೆ ಇ-ಖಾತೆ ಪಡೆದುಕೊಳ್ಳಿ: ಸಂಸದ ಡಿ.ಕೆ.ಸುರೇಶ್

Update: 2020-08-06 18:55 GMT

ರಾಮನಗರ, ಆ.6: ಗ್ರಾಮೀಣ ಭಾಗದ ಜನರಿಗೆ ಕೃಷಿಯೇತರ ಸ್ವತ್ತುಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಆಸ್ತಿ ದೃಢೀಕರಣಕ್ಕೆ ಇ-ಖಾತೆ ನೀಡಲು ನಿರಂತರ ಇ-ಸ್ವತ್ತು ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಮಾಯಗಾನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಬಸವನಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಇ-ಸ್ವತ್ತು ಖಾತಾ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಗ್ರಾಮೀಣ ಭಾಗದ ಜನರು ಫಾರಂ ನಂ- 10 ಹಾಗೂ 11 ಅನ್ನು ಆಸ್ತಿಯ ದಾಖಲೆ ಎಂದು ಪರಿಗಣಿಸಿದ್ದರು, ಒಬ್ಬರ ನಿವೇಶನ ಹಾಗೂ ಮನೆ ಬೇರೆಯವರ ಹೆಸರಲ್ಲಿ ಖಾತೆಯಾಗಿ ಗೊಂದಲ ಉಂಟಾಗುತ್ತಿತ್ತು ಇದನ್ನು ಪರಿಹರಿಸಲು ತಂತ್ರಜ್ಞಾನ ಬಳಸಿ ಇ-ಖಾತಾ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು

ರಾಮನಗರ ತಾಲೂಕಿನಲ್ಲಿ 69,000 ಸ್ವತ್ತುಗಳಿದ್ದು ಇದರಲ್ಲಿ 27,000 ಸ್ವತ್ತುಗಳಿಗೆ ಮಾತ್ರ ಇ-ಸ್ವತ್ತು ಪಡೆದುಕೊಂಡಿದ್ದಾರೆ. ಹೆಚ್ಚಾಗಿ ಆಸ್ತಿಯ ಮೇಲೆ ಸಾಲ ಪಡೆಯುವವರು ಇ-ಖಾತಾ ಪಡೆದುಕೊಂಡಿದ್ದಾರೆ ಉಳಿದವರು ಸಹ ಇ-ಖಾತೆ ಪಡೆದುಕೊಳ್ಳಲು ಮುಂದೆ ಬರಬೇಕು.

ಸಾರ್ವಜನಿಕರು ಹಾಗೂ ಗ್ರಾಮದ ಮುಖಂಡರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲರೂ ಇ-ಖಾತಾ ಪಡೆದುಕೊಳ್ಳಬೇಕು ಈ ದಾಖಲಾತಿ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬಿಲ್ ಕಲೆಕ್ಟರ್‍ಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಬರುವ ಖಾತೆಗಳನ್ನು ಇ-ಸ್ವತ್ತು ಖಾತೆ ಮಾಡಲು ಬೇಕಿರುವ ದಾಖಲಾತಿಗಳನ್ನು ಪಡೆದು ಗ್ರಾಮೀಣ ಜನರಿಗೆ ಯಾವುದೇ ತೊಂದರೆ ಮಾಡದೆ ಖಾತೆ ಮಾಡಿಕೊಡಬೇಕು ಎಂದು ಸುರೇಶ್ ಸೂಚನೆ ನೀಡಿದರು.

ಕೋವಿಡ್-19ರಿಂದಾಗಿ ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಗ್ರಾಮೀಣ ಜನರು ಕೆಲಸ ಕಳೆದುಕೊಂಡು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳನ್ನು ಒದಗಿಸಿ, ಮಾಯಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1600 ಜನ ಜಾಬ್‍ಕಾರ್ಡ್ ಹೊಂದಿದ್ದಾರೆ. ಇವರಿಗೆ ಉದ್ಯೋಗ ನೀಡಿ 5 ಕೋಟಿ ರೂ.ವರೆಗೂ ಅನುದಾನ ಬಳಕೆ ಮಾಡಿಕೊಳ್ಳಬಹುದು. ಕೆರೆ, ಕುಂಟೆ, ರೈತರ ಜಮೀನು ಅಭಿವೃದ್ಧಿ ಪಡಿಸಬಹುದು ಎಂದು ಅವರು ಹೇಳಿದರು.

ಕರ್ನಾಟಕ ರಿಮೋಟ್ ಸೆನ್ಸಿಂಗ್ ಮುಖಾಂತರ ರಾಮನಗರದಲ್ಲಿ 326 ಕೆರಗಳನ್ನು ಗುರುತಿಸಿ 176 ಕೆರೆಗಳ ಅಭಿವೃದ್ಧಿ ಕೆಲಸವನ್ನು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಸದಸ್ಯರವಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ಬಸಪ್ಪ, ತಾಲೂಕು ಪಂಚಾಯತಿ ಅಧ್ಯಕ್ಷ ಬದ್ರಯ್ಯ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಗಾಣಕಲ್ ನಟರಾಜು, ರಾಮನಗರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಹಾಗೂ ಇನ್ನಿತರಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News