ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಂಸತ್ತಿನಲ್ಲಿ ಚರ್ಚೆಯಾಗಲಿ: ವೆಲ್ಫೇರ್ ಪಾರ್ಟಿ ಆಗ್ರಹ

Update: 2020-08-06 18:56 GMT

ಬೆಂಗಳೂರು, ಆ.6: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಬಗ್ಗೆ ಸಂಸತ್‍ನಲ್ಲಿ ವಿಸ್ತೃತ ಚರ್ಚೆಯಾಗಬೇಕು. ಆ ನಂತರವೇ ಅದನ್ನು ಜಾರಿಗೆ ತರಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮೋಯಿನುದ್ದಿನ್ ಖಮರ್ ಆಗ್ರಹಿಸಿದ್ದಾರೆ.

ಆರೆಸೆಸ್ಸ್ ಮತ್ತು ಸಂಘ ಪರಿವಾರದ ಹಿನ್ನೆಲೆಯುಳ್ಳ ಕೇಂದ್ರದ ಬಿಜೆಪಿ ಸರಕಾರವು ಈ ಹಿಂದೆ ಪಠ್ಯದ ಕೇಸರೀಕರಣ, ಜೆಎನ್‍ಯು ವಿಶ್ವವಿದ್ಯಾಲಯ, ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಗಳಲ್ಲಿ ವಿವಾದಕ್ಕೆ ಗುರಿಯಾಗಿತ್ತು. ಆ ಪಕ್ಷದವರಿಗೆ ಮನುವಾದಿ ಮಾನಸಿಕತೆಯ ಇರುವುದರಿಂದ ಅವರು ಜಾರಿಗೆ ತರಲು ಹೊರಟಿರುವ ಶಿಕ್ಷಣ ನೀತಿ ಅನುಮಾನಾಸ್ಪದವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕ್, ಎಲ್‍ಐಸಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣದ ಪ್ರಸ್ತಾವಗಳ ನಡುವೆ ಹೊಸ ಶಿಕ್ಷಣ ನೀತಿ ತರುತ್ತಿರುವುದು ಅನುಮಾನ ಹುಟ್ಟುಹಾಕಿದೆ. ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂಬ ಶಂಕೆಯೂ ಇದೆ. ಕೋವಿಡ್‍ಗೆ ತುತ್ತಾಗಿರುವ ಜನರಿಗೆ ಆಸ್ಪತ್ರೆಗಳು ಮತ್ತು ವೆಂಟಿಲೇಟರ್‍ಗಳ ಅಗತ್ಯವಿದೆ. ಈ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.

ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ನರೇಂದ್ರಮೋದಿ ಸರಕಾರ ದಿನಕ್ಕೊಂದು ಕಾಯ್ದೆ ತಿದ್ದುಪಡಿ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಯಾವುದೇ ಹೊಸ ಯೋಜನೆಗಳನ್ನು ಅಥವಾ ನೀತಿಗಳನ್ನು ರೂಪಿಸುವ ಮೊದಲು ಸಂಸತ್‍ನಲ್ಲಿ ಚರ್ಚೆಗೊಳಪಡಿಸಬೇಕು. ಅಥವಾ ಇರುವ ವ್ಯವಸ್ಥೆಯನ್ನು ಭದ್ರಪಡಿಸಿ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಹಾಗೂ ಕೋವಿಡ್ ಪೀಡಿತರಿಗೆ ಸೂಕ್ತ ಚಿಕಿತ್ಸೆಕೊಡುವ ವ್ಯವಸ್ಥೆ ಮಾಡಬೇಕು' ಎಂದು ಮೋಯಿನುದ್ದಿನ್‍ ಖಮರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News