ನೆರೆ ಪರಿಸ್ಥಿತಿ ನಿರ್ವಹಣೆಗೆ ವಿಶೇಷ ಕಾರ್ಯಪಡೆ ರಚಿಸಿ: ದೇವೇಗೌಡ ಒತ್ತಾಯ

Update: 2020-08-07 10:58 GMT

ಬೆಂಗಳೂರು, ಆ. 7: ಸತತ ನೆರೆಯಿಂದ ಸಂತ್ರಸ್ತರಾಗಿರುವ ಕರ್ನಾಟಕ ರಾಜ್ಯದ ಜನತೆಗೆ ಕೇಂದ್ರ ಸರಕಾರವು ಕೂಡಲೇ ವಿಶೇಷ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಈ ಸಂಬಂಧ ರಾಜ್ಯ ಸರಕಾರವು, ಕೇಂದ್ರ ಸರಕಾರದ ಮೇಲೆ ಒತ್ತಡ ಏರಬೇಕೆಂದು ಒತ್ತಾಯಿಸಿದ್ದಾರೆ.

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಪರಿಹಾರ ಕಾಮಗಾರಿಗಳಿಗೆ ತಕ್ಷಣ ಹಣಕಾಸಿನ ವ್ಯವಸ್ಥೆಯನ್ನು ಮಾಡಬೇಕು. ರಾಜ್ಯದಲ್ಲಿ ಮಹಾಮಾರಿ ಕೊರೋನ ಒಂದು ಕಡೆ ವ್ಯಾಪಕವಾಗಿ ಹರಡುತ್ತಿದೆ ಇದರ ಜೊತೆಗೆ ದುರದೃಷ್ಟವಷಾತ್ ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನತೆ ಕಂಗಾಲು ಪಡುವಂತಾಗಿದೆ. ಅತಿವೃಷ್ಟಿಯಿಂದ ನಲುಗಿರುವ ರಾಜ್ಯದ ಜನ ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸ ತತ್‍ಕ್ಷಣ ಆಗಬೇಕಾಗಿದೆ ಎಂದು ದೇವೇಗೌಡ ತಿಳಿಸಿದ್ದಾರೆ.

ಸರಕಾರ ಕೈಗೊಳ್ಳುವ ಪರಿಹಾರ ಕಾರ್ಯಕ್ಕೆ ನಾವೆಲ್ಲ ಜೊತೆ ನಿಲ್ಲಲಿದ್ದೇವೆ. ಇದೆ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೋನ ಸೋಂಕು ತಗುಲಿದೆ ಅವರು ಆಸ್ಪತ್ರೆಯಿಂದಲೇ ಕಾರ್ಯ ನಿರ್ವಹಿಸಬೇಕಾದ ಸಂದರ್ಭ ಬಂದಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳು ಮುಂಗಾರಿನ ಅಬ್ಬರದ ಭೀತಿಯಿಂದ ನಲುಗಿದೆ ಅದರಿಂದ ಸಿಎಂ ಮತ್ತು ಸಚಿವರುಗಳು ವಿಶೇಷ ಕಾರ್ಯಪಡೆ ರಚಿಸಿ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದು ದೇವೇಗೌಡ ಇದೇ ವೇಳೆ ಸಲಹೆ ನೀಡಿದ್ದಾರೆ.

ಅತಿವೃಷ್ಟಿಯಿಂದ ಬಳಲುತ್ತಿರುವ ರಾಜ್ಯದ ಜನತೆಗೆ ಕೂಡಲೇ ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ರಾಜ್ಯದೆಲ್ಲೆಡೆ ಬಹುತೇಕ ಬೆಳೆಗಳು ಹಾನಿಗೊಳಗಾಗಿವೆ. ಜೊತೆಗೆ ಮನೆ-ಮಠ ಕಳೆದುಕೊಂಡವರಿಗೆ ವಿಳಂಬವಿಲ್ಲದೆ ಸರಕಾರ ಕೂಡಲೇ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ದೇವೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News