ಮಳೆಯಿಂದ ಮನೆ ಹಾನಿಗೊಳಗಾದ ಸಂತ್ರಸ್ಥರಿಗೆ ತುರ್ತು ಪರಿಹಾರ ನೀಡಿ: ಕೆ.ಎಸ್.ಈಶ್ವರಪ್ಪ

Update: 2020-08-07 11:47 GMT

ಶಿವಮೊಗ್ಗ,ಆ.7: ಮಳೆಯಿಂದ ಮನೆ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ತುರ್ತು ಕ್ರಮಕ್ಕಾಗಿ ರೂ.10,000/-ಗಳ ಪರಿಹಾರಧನವನ್ನು ಕೂಡಲೇ ನೀಡುವಂತೆ ಹಾಗೂ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದಲ್ಲಿ ಅವರಿಗೆ ಮನೆಯನ್ನು ಪುನರ್ ನಿರ್ಮಿಸಿಕೊಳ್ಳಲು ಸರ್ಕಾರ ನೀಡುವ 5ಲಕ್ಷ ರೂ.ಗಳ ಬಾಬ್ತು ಒಂದು ಲಕ್ಷ ರೂ.ಗಳನ್ನು ಅಂದೇ ಬಿಡುಗಡೆಗೊಳಿಸುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಜಿಲ್ಲಾಡಳಿತ ಸಭಾಂಗಣದಲ್ಲಿ ಮಳೆ ಹಾನಿ ಹಾಗೂ ತುರ್ತು ಪರಿಹಾರ ಕ್ರಮಗಳಿಗಾಗಿ ಜಿಲ್ಲಾಡಳಿತದ ವತಿಯಿಂದ ಕೈಗೊಂಡ ಹಾಗೂ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಬಾದಿತ ಎಲ್ಲಾ ಕುಟುಂಬಗಳಿಗೆ ತಕ್ಷಣದ ಪರಿಹಾರ ನೀಡುವುದರ ಜೊತೆಗೆ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಸೂಕ್ತ ವಸತಿ ಕಲ್ಪಿಸಬೇಕು. ಕಳೆದ ಸಾಲಿನಲ್ಲಿ ಇಂತಹ ಸಂದಿಗ್ಧ ಸಂದರ್ಭದಲ್ಲಿ ಆರಂಭಿಸಲಾಗಿದ್ದ ನೆರೆ ಪರಿಹಾರ ಕೇಂದ್ರಗಳನ್ನು ಅಲ್ಲಿಯೇ ಹಾಗೂ ಅಗತ್ಯವಿರುವಲ್ಲಿ ಸ್ಥಾಪಿಸಲು ಸಿದ್ಧರಾಗಿರುವಂತೆ  ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸಂತ್ರಸ್ಥರಿಗೆ ನೀಡುವ ಪರಿಹಾರಧನಕ್ಕೆ ವಿಳಂಬ ಆಗದಂತೆ ಹಾಗೂ ಯಾರೊಬ್ಬ ಸಂತ್ರಸ್ಥರು ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ನದಿದಂಡೆಗಳ ನಿವಾಸಿಗಳು ನದಿದಂಡೆಗೆ ತೆರಳದಂತೆ ಅಲ್ಲಿನ ನಿವಾಸಿಗಳಿಗೆ ಸೂಚನೆ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿರುವಂತೆ ಅವರು ಸೂಚಿಸಿದರು.

ಕಳೆದ ಸಾಲಿನಲ್ಲಿ ವಿವಿಧ ಕಾರಣಗಳಿಂದಾಗಿ ಕೈಬಿಟ್ಟು ಹೋಗಿದ್ದ ಸಂತ್ರಸ್ಥರಿಗೂ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ಗುಡ್ಡ ಕುಸಿತದಿಂದ ಹಾನಿಗೊಳಗಾಗಿದ್ದ ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ಥರೊಂದಿಗೆ ಚರ್ಚಿಸಿ, ಅವರ ನಿರೀಕ್ಷೆಯಂತೆ ಪರಿಹಾರ ಕಾರ್ಯ ಕೈಗೊಳ್ಳಬಹುದಾದ ಸಾದ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಅವರು ಸೂಚಿಸಿದರು.
ಕಳೆದ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ತಿಗೆ ಬಿಡುಗಡೆಯಾಗಿದ್ದ 20ಲಕ್ಷ ರೂ.ಗಳ ಅನುದಾನ ಬಳಕೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಪೂರ್ಣಗೊಳಿಸಿದ ಕಾಮಗಾರಿ ಸರಿಯಾಗಿರುವ ಬಗ್ಗೆಯೂ ಪರಿಶೀಲಿಸುವಂತೆ ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನ ಹಾಗೂ ಕಟ್ಟಡ ನಿರ್ಮಾಣಗೊಂಡಿರುವ ಕುರಿತು ೩-೪ದಿನಗಳಲ್ಲಿ ವಿವರವಾದ ಮಾಹಿತಿ ನೀಡುವಂತೆ ಮಹಿಳಾ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಹಲವೆಡೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮಳೆಯಿಂದ ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಬಗ್ಗೆಯೂ ಗಮನಹರಿಸಬೇಕು. ಶಿವಮೊಗ್ಗ-ಆಗುಂಬೆ ಮಾರ್ಗದಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಳೆಯಿಂದ ಧರೆಗುರುಳಿದ ಮರಗಳಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಹಾಗೂ ಪುನರ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಹಾಳಾಗಿರುವ ಟ್ರಾನ್ಸಫರ್ಮರ್‌ಗಳ ಬದಲಾವಣೆ ಮಾಡುವಲ್ಲಿ ಕೈಗೊಂಡ ಕ್ರಮಗಳ ಕುರಿತು ಮೆಸ್ಕಾಂನ ಕಾರ್ಯಪಾಲಕ ಅಭಿಯಂತರರಿಂದ ಸಚಿವರು ಮಾಹಿತಿ ಪಡೆದ ಅವರು ಅರಣ್ಯ ಇಲಾಖೆ ಹಾಗೂ ಮೆಸ್ಕಾಂನ ಅಧಿಕಾರಿಗಳೊಂದಿಗೆ ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News