ಪ್ರವಾಹ ವಿಕೋಪವನ್ನು ಎದುರಿಸಲು ಸರಕಾರ ಸಜ್ಜಾಗಲಿ: ಎಸ್‍ಡಿಪಿಐ

Update: 2020-08-07 13:47 GMT

ಬೆಂಗಳೂರು, ಆ.7: ರಾಜ್ಯ ಸರಕಾರ ರಾಜ್ಯದಲ್ಲಿ ಭೀಕರವಾಗಿ ಸುರಿಯುತ್ತಿರುವ ಮಳೆ ಪ್ರವಾಹವನ್ನು ಎದುರಿಸಲು ಕೂಡಲೇ ಸನ್ನದ್ಧರಾಗಬೇಕು ಎಂದು ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಆಗ್ರಹಿಸಿದ್ದಾರೆ.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿದವೆ. ಬಿರುಗಾಳಿಯಿಂದ ಮರಗಳು ಉರುಳಿ ಬಿದ್ದಿರುವ ಹಾಗೂ ಮನೆಗಳು ಕುಸಿದು ಬಿದ್ದಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.

ಕೊಡಗು ಜಿಲ್ಲೆಯ ಕುಶಾಲನಗರ, ತಲಕಾವೇರಿ, ಎಮ್ಮೆ ಮಾಡು ಮುಂತಾದ ಪ್ರದೇಶಗಳು ಜಲಾವೃತವಾಗಿವೆ. ಮನೆಗಳಲ್ಲಿರುವ ದವಸಧಾನ್ಯ, ಬಟ್ಟೆಬರೆ, ಪಾತ್ರೆ ಪಗಡಿ ಮುಂತಾದ ವಸ್ತುಗಳು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಿರಂತರ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿ ಕೊಡಗು ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಪ್ರಕೋಪವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ.

ಸರಕಾರ ಜನರ ರಕ್ಷಣೆಗೆ ಹಾಗೂ ಸೂಕ್ತ ವ್ಯವಸ್ಥೆ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪೂರ್ಣ ಪ್ರಮಾಣದಲ್ಲಿ ರಂಗಕ್ಕಿಳಿಯಬೇಕು. ಕಳೆದ ವರ್ಷ ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಪ್ರವಾಹದಿಂದ ಸಾವಿರಾರು ಮನೆಗಳು ಕೊಚ್ಚಿ ಹೋಗಿದ್ದು ಲಕ್ಷಾಂತರ ಜನರು ನಿರ್ವಸಿತರಾಗಿದ್ದರು. ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದ್ದರೂ ಕೇಂದ್ರ ಸರಕಾರ ನಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು.

ಕಳೆದ ವರ್ಷದ ಸಂತ್ರಸ್ತರು ಇನ್ನೂ ಸರಿಯಾದ ಮನೆಗಳಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಈ ವರ್ಷವೂ ಕೂಡ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮನೆ ಕುಸಿತ, ಪ್ರವಾಹ, ಗುಡ್ಡ ಕುಸಿತ ಇತ್ಯಾದಿಗಳಿಂದ ಮನೆಗಳು ಹಾಗೂ ಕೃಷಿಭೂಮಿಗೆ ಭಾರಿ ಹಾನಿಯಾಗಿವೆ. ದವಸಧಾನ್ಯ, ಮನೆ ಬಳಕೆ ವಸ್ತು, ಬಟ್ಟೆಬರೆ ಕಳೆದುಕೊಂಡ ಕುಟುಂಬಗಳು ಪರಿತಪಿಸುತ್ತಿವೆ. ಸರಕಾರ ಹಾಗೂ ಜಿಲ್ಲಾಡಳಿತಗಳು ತಕ್ಷಣ ಹಾಗೂ ಸೂಕ್ತವಾಗಿ ಸ್ಪಂದಿಸಬೇಕು ಎಂದು ಪುಟ್ಟ ನಂಜಯ್ಯ ಆಗ್ರಹಿಸಿದ್ದಾರೆ.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್‍ಡಿಪಿಐ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಮ್ಮ ಕಾರ್ಯಕರ್ತರನ್ನು ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಮತ್ತು ಜನರನ್ನು ರಕ್ಷಿಸಲು ಹಾಗೂ ಸೇವೆ ಗೈಯಲು ತರಬೇತಿ ನೀಡಿ ಸಿದ್ಧತೆ ನಡೆಸಿದ್ದು ಕಾರ್ಯಕರ್ತರನ್ನು ಕಟ್ಟೆಚ್ಚರದಲ್ಲಿರಿಸಿದೆ. 

ಪಕ್ಷದ ಕಾರ್ಯಕರ್ತರು ಈಗಾಗಲೇ ಈ ಕೆಲಸದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಜನಸೇವೆ, ರಕ್ಷಣೆ ಹಾಗೂ ಜನಹಿತಚಿಂತನೆಯ ಧ್ಯೇಯದೊಂದಿಗೆ  ಎಸ್ಬಿಐ ಕಾರ್ಯಕರ್ತರು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜೀವದ ಹಂಗುತೊರೆದು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶವಸಂಸ್ಕಾರ, ಆಹಾರ -ದಿನಸಿ- ಔಷಧಿಗಳ ಪೂರೈಕೆ, ವಲಸೆ ಕಾರ್ಮಿಕರ ಸೇವೆ, ಗ್ರಾಮ ನಗರಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ, ಕೋವಿಡ್ ಬಗ್ಗೆ ಜನಜಾಗೃತಿ, ಸ್ವಯಂಸೇವೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಪಕ್ಷದ ಹೆಮ್ಮೆಯಾಗಿದೆ ಎಂದು ಪುಟ್ಟ ನಂಜಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News