ಚಿಕ್ಕಮಗಳೂರು : ಮಳೆಯಿಂದ ಮನೆಗೆ ಹಾನಿ, ತಾಯಿ ಮಗನ ರಕ್ಷಣೆ

Update: 2020-08-07 17:15 GMT

ಚಿಕ್ಕಮಗಳೂರು, ಆ. 7: ನಿರಂತರ ಸುರಿಯುತ್ತಿರುವ ಮಳೆಯಿಂದ ಹಿರೇಮಗಳೂರಿನ ಕರಾಳಮ್ಮ ದೇವಾಲಯ ಸಮೀಪದ ಸರ್ಕಲ್ ಬಳಿ ಇರುವ ಗಳಗುಂಡಿಯಲ್ಲಿ ವಾಸದ ಮನೆಯ ಗೋಡೆ ಹಾನಿಗೊಂಡು ಮನೆ ಪೂರ್ಣ ನೆಲಸಮಗೊಳ್ಳುವ ಹಂತದಲ್ಲಿದ್ದ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ತಾಯಿ ಮತ್ತು ಮಗನನ್ನು ರಕ್ಷಣೆ ಮಾಡಿದ್ದಾರೆ.

ಶಾರದಮ್ಮ ಎಂಬಾಕೆ ಸಂಬಂಧಿಕರ ಮನೆಯಲ್ಲಿ ತನ್ನ ಮಗನೊಂದಿಗೆ ವಾಸವಾಗಿದ್ದು, ಮನೆಯ ಹಿಂಭಾಗದ ಗೋಡೆ ನೀರಿನಿಂದ ಸಂಪೂರ್ಣ ಒದ್ದೆಯಾಗಿ ನೆಲಕ್ಕುರುಳಿದ್ದು ಬಾಗಿಲು ಪೂರ್ಣ ಜಖಂಗೊಂಡು ರಕ್ಷಣೆ ಇಲ್ಲದೆ ಗಾಳಿ ಚಳಿ ಮತ್ತು ನೀರಿನ ಒದ್ದೆಯಾಗಿರುವ ನೆಲದಲ್ಲೇ ವಾಸವಾಗಿ ದ್ದರು. ಒಂದೆರಡು ದಿನಗಳಲ್ಲಿ ಮನೆ ಕುಸಿಯುವ ಹಂತ ತಲುಪಿತ್ತು. ಮನೆ ಹಾನಿಗೊಂಡಿರುವುದನ್ನು ಗಮನಿಸಿದ್ದ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕ ಎಚ್.ಸಿ.ಗಂಗಾಧರ್, ಆರಾಧನಾ ಸಮಿತಿ ಮಾಜಿ ಸದಸ್ಯ ಎಚ್.ಎಸ್.ಜಗದೀಶ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಪ್ರಧಾನ ಕಾರ್ಯದರ್ಶಿ ಎಚ್.ಎನ್.ಸುರೇಶ್ ವಿಚಾರವನ್ನು ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಅವರಿಗೆ ಮುಟ್ಟಿಸಿದ್ದರು.

ತಕ್ಷಣ ನಗರಸಭೆ ಆಯುಕ್ತ ಬಸವರಾಜ್ ಮತ್ತು ಎಂಜಿನಿಯರ್ ಚಂದನ್ ಅವರಿಗೆ ಫೋನಾಯಿಸಿ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡಿಕೊಂಡ ಕೋರಿಕೆಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದುಸ್ಥಿತಿಯನ್ನು ಕಂಡು ಮರುಕ ವ್ಯಕ್ತಪಡಿಸಿದ ಪೌರಾಯುಕ್ತರು, ಇಲ್ಲಿಂದ ಬೇರೆ ಸ್ಥಳಕ್ಕೆ ಸ್ಥಳಾಂತರವಾಗುವಂತೆ ಶಾರದಮ್ಮ ಅವರಿಗೆ ತಿಳಿಸಿ ಪರ್ಯಾಯ ವ್ಯವಸ್ಥೆಗಾಗಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು.

ಕೋದಂಡರಾಮಚಂದ್ರಸ್ವಾಮಿ ದೇವಾಲಯಕ್ಕೆ ಸಮೀಪದ ಶಾಲಾ ಕಟ್ಟಡದ ರಂಗಮಂಟಪದ ಕೊಠಡಿಯಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಮಾಡಲು ಎಂಜಿನಿಯರ್‍ಗಳಿಗೆ ಸೂಚಿಸಿದರಲ್ಲದೆ ಕಲ್ಲುದೊಡ್ಡಿಯಲ್ಲಿ ಆಶ್ರಯ ಮನೆಯಲ್ಲಿ ದಾಖಲೆಗಳಿಲ್ಲದೆ ವಾಸವಾಗಿರುವವರನ್ನು ಖಾಲಿ ಮಾಡಿಸಿ ಶಾರದಮ್ಮ ಅವರಿಗೆ ನೀಡಲು ಕ್ರಮ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಸಮಸ್ಯೆ ಬಗ್ಗೆ ಫೋನಾಯಿಸಿದ ಕೂಡಲೆ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಪೌರಾಯುಕ್ತ ಬಸವರಾಜ್ ಅವರು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ಹಿರೇಮಗಳೂರು ವಾರ್ಡಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.

ಎಂಜಿನಿಯರ್ ಚಂದನ್, ರಕ್ಷಿತ್, ಆಶ್ರಯ ಸಮಿತಿ ಮಾಜಿ ಸದಸ್ಯ ಎಚ್.ಟಿ.ವೆಂಕಟೇಶ್, ಆರಾಧನಾ ಸಮಿತಿ ಮಾಜಿ ಸದಸ್ಯ ಎಚ್.ಎಸ್. ಜಗದೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಿರ್ದೇಶಕ ಎಚ್.ಸಿ.ಗಂಗಾಧರ್, ಮುಖಂಡರಾದ ಹೇಮಂತ್, ಸಿದ್ದೇಶ್, ದಿಲೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News